ಹಾಸನ:ಅಕ್ಷರ ಬುಕ್ ಹೌಸ್-‘ಬುಕ್ ಮಾತು’-ಕುವೆಂಪು ಸೃಷ್ಟಿಸಿರುವ ಸಾಹಿತ್ಯಲೋಕವನ್ನು ಸವಿಯಲು ಜನ್ಮ ಸಾಲದು-ಜಾ.ನ.ತೇಜಶ್ರೀ

ಹಾಸನ:ಬೊಮ್ಮನಹಳ್ಳಿ ಕಿಂದರಿಜೋಗಿಯoಥ ಮಕ್ಕಳ ಕಥೆಗಳಿಂದ ಹಿಡಿದು ರಾಮಾಯಣ ದರ್ಶನಂ ವರೆಗೆ ಕುವೆಂಪು ಸೃಷ್ಟಿಸಿರುವ ಸಾಹಿತ್ಯಲೋಕವನ್ನು ನೋಡಲು ನಮಗೆ ಒಂದು ಜನ್ಮ ಸಾಲದು ಎಂದು ಸಾಹಿತಿ ಜಾ.ನ.ತೇಜಶ್ರೀ ಹೇಳಿದರು.

ನಗರದ ಅಕ್ಷರ ಅಕಾಡೆಮಿ ಆವರಣದಲ್ಲಿ ಈಚೆಗೆ ಅಕ್ಷರ ಬುಕ್ ಹೌಸ್,ರೋಟರಿ ಕ್ಲಬ್ ಆಪ್ ಹಾಸನ ರಾಯಲ್ ವತಿಯಿಂದ ಹಮ್ಮಿಕೊಂಡಿದ್ದ ‘ಬುಕ್ ಮಾತು’ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುವೆಂಪುರವರ ವಿಚಾರಗಳು ಸಾರ್ವಕಾಲಿಕವಾದದ್ದು,
ಭಾವ, ವಿಚಾರ, ಭಾಷೆ ಈ ಮೂರೂ ಅಂಶಗಳ ಮೇಲೆ ಹಿಡಿತ ಹೊಂದಿದ್ದ ಅಪರೂಪದ ಚೇತನ ಕುವೆಂಪು. ಸಮಯ ಸಾಲದು ಎಂದು ಬೊಬ್ಬೆ ಹೊಡೆಯುವ ನಮಗೆ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯದ ಉಪಕುಲಪತಿಯಂತಹ ಬಹು ದೊಡ್ಡ ಜವಾಬ್ದಾರಿಯ ಕಾರ್ಯ ನಿರ್ವಹಿಸುತ್ತ, ರಾಜ್ಯಕ್ಕೆ ಅಂದು ಒದಗಿದ್ದ ಸಂಕಷ್ಟಗಳಿಗೆ ದನಿಯಾಗುತ್ತ, ವಿಶ್ವಮಾನವ ಕಹಳೆ ಊದಿದ ಕುವೆಂಪು ಅವರ ಚೈತನ್ಯ ಅರ್ಥವಾಗಬೇಕಿದೆ, ಆದರ್ಶವಾಗಬೇಕಿದೆ.

ಕುವೆಂಪು ಅವರ ವಿಚಾರಕ್ರಾಂತಿ ನಮ್ಮ ಮಕ್ಕಳ ಪಠ್ಯವಾಗಬೇಕಿದೆ. ಕುವೆಂಪು ಅವರನ್ನು ವಿದ್ಯಾರ್ಥಿಗಳ ಮನಗಳಲ್ಲಿ ನೆಲೆಗೊಳಿಸುವ ಕರ್ತವ್ಯ ನಮ್ಮ ಮೇಲಿದೆ ಎಂದು ಹೇಳಿದರು.

ಅಕ್ಷರ ಅಕಾಡೆಮಿ ಮುಖ್ಯಸ್ಥ ಟೈಮ್ಸ್ ಬಿ.ಕೆ. ಗಂಗಾಧರ್ ಮಾತನಾಡಿ,ಕುವೆಂಪು ಜನ್ಮದಿನದಂದು ಎಲ್ಲರ ವಾಟ್ಸಪ್ ಸ್ಟೇಟಸ್ ನಲ್ಲಿ ಕುವೆಂಪು ಚಿತ್ರವಿರುತ್ತದೆ ಆದರೆ ಏಕಿರುತ್ತದೆ ಎಂಬ ಪ್ರಶ್ನೆಗೆ ನಾಲ್ಕು ಸಾಲು ಹೇಳಲು ಹೆಚ್ಚು ಜನಕ್ಕೆ ತಿಳಿಯದು. ಒಬ್ಬ ವ್ಯಕ್ತಿಯ ಜೀವನದ ಎಲ್ಲ ಹಂತಗಳಲ್ಲೂ ಬೆಳಕಾಗಬಲ್ಲ ಚೈತನ್ಯ ನಮ್ಮ ಕುವೆಂಪು ಎoದರು.

ಸಾಹಿತ್ಯಾಸಕ್ತ ಹಾಗೂ ಕರ್ನಾಟಕ ಬೆಳೆಗಾರರ ಒಕ್ಕೂಟದ ನಿರ್ದೇಶಕ ಟಿ.ಪಿ. ಸುರೇಂದ್ರ ಮಾತನಾಡಿ, ನೂರು ದೇವರನು ನೂಕಾಚೆ ದೂರ ಎಂದಿದ್ದ ಕುವೆಂಪುರವರ ಹೇಳಿಕೆಯನ್ನು ನಮಗಿಷ್ಟ ಬಂದoತೆ ಅರ್ಥೈಸಿಕೊಳ್ಳುವ ನಾವು, ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ ಎಂದು ಹೇಳಿರುವುದನ್ನು ಮರೆತೇ ಬಿಡುತ್ತೇವೆ ಎಂದು ಹೇಳಿದರು.

ಹಾಸನದ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶಿವರಾಮೇಗೌಡ ಅವರು ಕುವೆಂಪು ಜೊತೆಗೆ ನಡೆಸಿದ ಪತ್ರಸಂವಹನ ಹಾಗೂ ಕುವೆಂಪು ಜೊತೆಗಿನ ಒಡನಾಟ ಹಂಚಿಕೊoಡರು.

ಕಾರ್ಯಕ್ರಮದಲ್ಲಿ ಬರುವ ಸಂಕ್ರಾoತಿ ನಿಮಿತ್ತ ಹಾಜರಿದ್ದವರೆಲ್ಲರಿಗೂ ಕೊಬ್ಬರಿ ಬೆಲ್ಲ ವಿತರಿಸಲಾಯಿತು. ಕುವೆಂಪು ಪುಸ್ತಕಗಳ ಖರೀದಿಗೆ ಅಕ್ಷರ ಬುಕ್ ಹೌಸ್ ರಿಯಾಯಿತಿ ನೀಡಿತ್ತು. ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳ ಉಡುಗೊರೆಯಾಗಿದೆ ನೀಡಲಾಯಿತು.

Leave a Reply

Your email address will not be published. Required fields are marked *

× How can I help you?