ಹಾಸನ:ಒಬ್ಬ ಬರಹಗಾರನಿಗೆ ತಾನು ಬರೆದ ಪುಸ್ತಕ ಕುರಿತು ಓದುಗನ ಮುಂದೆ ನಿಂತು ಮಾತನಾಡುವುದು ಅತ್ಯದ್ಭುತವಾದ ಅನುಭವ ಎಂದು ಕಾದಂಬರಿಕಾರ ವಸುಧೇಂದ್ರ ನುಡಿದರು.
ನಗರದ ಅಕ್ಷರ ಅಕಾಡೆಮಿಯಲ್ಲಿ ಬುಧವಾರ ಅಕ್ಷರ ಬುಕ್ ಹೌಸ್,ವತಿಯಿಂದ ಆಯೋಜಿಸಿದ್ದ 5ನೇ ಕಂತಿನ ಬುಕ್ ಮಾತು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ‘ರೇಷ್ಮೆ ಬಟ್ಟೆ’ ಕಾದಂಬರಿಯನ್ನು ಕುರಿತು ಮಾತನಾಡಿದ ಅವರು, ಬಾಲ್ಯದಲ್ಲಿ ನನ್ನ ತಂದೆ ಸರ್ಕಾರಿ ಶಾಲೆಗೆ ನನ್ನನ್ನು ಸೇರಿಸಿದಾಗ ದುಃಖ ಪಟ್ಟಿದ್ದೆ. ಆದರೆ ಇಂದು ಪ್ರತಿದಿನ ಅವರನ್ನು ನೆನೆದುಕೊಂಡು ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನಾನು ಸರ್ಕಾರಿ ಕನ್ನಡ ಶಾಲೆಯಲ್ಲಿ ಓದದೇ ಇದ್ದಿದ್ದರೆ ಇಂದು ಕನ್ನಡ ಸಾಹಿತ್ಯದಲ್ಲಿ ಕೃಷಿ ಮಾಡಲು ಸಾಧ್ಯವಾಗುತ್ತಿರಲಿಲ್ಲ.
‘ತೇಜೋ ತುಂಗಭದ್ರಾ’ಕಾದಂಬರಿಗೆ ಸಿಕ್ಕಿದ ದೊಡ್ಡ ಮಟ್ಟದ ಪ್ರತಿಕ್ರಿಯೆಯು ಜನರು ಸ್ಥಳೀಯ ಇತಿಹಾಸವನ್ನಷ್ಟೇ ಅಲ್ಲ ಜಾಗತಿಕ ಇತಿಹಾಸವನ್ನು ಓದುವ ಆಸಕ್ತಿಯನ್ನು ಹೊಂದಿದ್ದಾರೆ ಎಂಬ ಅಂಶವನ್ನು ನನಗೆ ಮನದಟ್ಟು ಮಾಡಿದೆ. ನಾನು ರಾಜ್ಯಾದ್ಯಂತ ಈ ಸುಂದರ ಅನುಭವವನ್ನು ಹಾಗೂ ಓದುಗರ ಪ್ರೀತಿಯನ್ನು ಪಡೆಯುತ್ತಿದ್ದೇನೆ. ರೇಷ್ಮೆ ಬಟ್ಟೆ ಕಾದಂಬರಿಯು ಏಷ್ಯಾ ದೇಶಗಳ ಕುರಿತ ಕಥೆಯಾಗಿದ್ದು ತಂತ್ರಜ್ಞಾನ ಹಾಗೂ ಜಾಗತೀಕರಣವು ಸಾಮಾನ್ಯರ ಬದುಕನ್ನು ಹೇಗೆ ತಲ್ಲಣಗೊಳಿಸುತ್ತದೆ ಎಂಬುದು ಸದಾ ನನ್ನನ್ನು ಕಾಡುವ ವಿಚಾರ ಎಂದರು.
ನಾವು ಹೊಯ್ಸಳರ ಹೊಯ್ಸಳೇಶ್ವರ ದೇವಾಲಯಗಳನ್ನು ಕಟ್ಟಿಸಿದ ವಿಷ್ಣುವರ್ಧನನ ಬಗ್ಗೆ ಮಾತನಾಡುತ್ತೇವೆ ಒಬ್ಬ ಶಿಲ್ಪಿ ಜಕಣಾಚಾರಿಯ ಬಗ್ಗೆ ಮಾತನಾಡುತ್ತೇವೆ. ಆದರೆ ಅಲ್ಲಿ ಕೆಲಸ ಮಾಡಿದ ಸಾವಿರಾರು ಶಿಲ್ಪಿಗಳ ಜೀವನವನ್ನು ನಾವು ನೆನೆಯುವುದಿಲ್ಲ ಕಲ್ಪಿಸಿಕೊಳ್ಳು ವುದಿಲ್ಲ.ಜನಸಾಮಾನ್ಯರ ಜೀವನ ಹಾಗೂ ಅವರ ಕಥೆಗಳು, ತ್ಯಾಗಗಳು ನನ್ನನ್ನು ಸದಾ ಕಾಡುತ್ತವೆ ಎಂದು ಹೇಳಿದ ಅವರು ಅಕ್ಷರ ಬುಕ್,ಹೌಸ್ ಹಾಸನಕ್ಕೇ ಒಂದು ಭೂಷಣವಾಗಿದ್ದು ಉತ್ತಮ ಅಭಿರುಚಿ ತುಂಬಿರುವ ರಾಜ್ಯದ ಅತ್ಯುತ್ತಮ ಪುಸ್ತಕದಂಗಡಿ ಎಂದರು.
ಅಕ್ಷರ ಅಕಾಡೆಮಿ ಹಾಗೂ ಅಕ್ಷರ ಬುಕ್ ಹೌಸ್ ಮುಖ್ಯಸ್ಥ ಟೈಮ್ಸ್,ಗಂಗಾಧರ್ ಮಾತನಾಡಿ, ಪುಸ್ತಕ ಕೊಳ್ಳುವವರಿಲ್ಲ, ಓದುವವರಿಲ್ಲ ಅನ್ನುವುದೆಲ್ಲ ಒಪ್ಪುವ ಮಾತಲ್ಲ. ಒಳ್ಳೆಯ ಪುಸ್ತಕವನ್ನು ಜನ ಓದಿಯೇ ಓದುತ್ತಾರೆ. ಇಂದು ಈ ಪುಸ್ತಕ ಪ್ರಿಯ ಬುಕ್ ಮಾತು ಕಾರ್ಯಕ್ರಮಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುವುದೇ ಅದಕ್ಕೆ ಸಾಕ್ಷಿ. ಪುಸ್ತಕ ಹಾಗೂ ತಾಯಿ ಸ್ಥಾನವನ್ನು ಯಾವ ತಂತ್ರಜ್ಞಾನವೂ ಸ್ಥಳಾಂತರಿಸಲಾಗದು.
ನಮ್ಮ ಮುಂದಿನ ಯುವ ಪೀಳಿಗೆಗೆ ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಬೇಕಾಗಿದೆ. ಪುಸ್ತಕದ ಅಂಗಡಿಗೆ ಅವರುಗಳನ್ನು ಕರೆತಂದು ಚಿಕ್ಕ ಚಿಕ್ಕ ಕಥೆಗಳು ಇರುವ ಪುಸ್ತಕಗಳಿಂದ ಮಹಾನ್ ವ್ಯಕ್ತಿಗಳ ಕಥೆ, ಕಾದಂಬರಿ ಹಾಗೂ ಇನ್ನಿತರ ಪುಸ್ತಕಗಳನ್ನು ಓದುವಂತೆ ಮಾಡಬೇಕಾಗಿದೆ ಎಂದು ಹೇಳಿದರು.
ಪಡುವಲಹಿಪ್ಪೆ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಶಿವಕುಮಾರ್ ಮಾತನಾಡಿ, ರೇಷ್ಮೆ ಬಟ್ಟೆ ಕಾದಂಬರಿಯು ಇನ್ನೂ ವೇದಿಕೆಯ ಮೇಲೆ ಸಾಂಪ್ರದಾಯಿಕವಾಗಿ ಬಿಡುಗಡೆ ಗೊಂಡಿಲ್ಲ. ಆದರೆ ಅದು ಓದುಗನ ಮುಂದೆ ಬಹು ವಿಸ್ತಾರವಾಗಿ ತನ್ನ ಪುಟಗಳನ್ನು
ತೆರೆದುಕೊಂಡು ಓದಿಸಿಕೊಂಡು ಹೋಗುತ್ತಿದೆ. ಈಗಾಗಲೇ ಎರಡನೇ ಮುದ್ರಣ ಕಾಣುತ್ತಿರುವ ‘ರೇಷ್ಮೆ ಬಟ್ಟೆ’ಯ ನಿಜವಾದ ಪುಸ್ತಕ ಬಿಡುಗಡೆ ಕಾರ್ಯಕ್ರಮವೆಂದರೆ ಇದೇ. ತಮ್ಮ ಸ್ವಂತ ಖರ್ಚಿನಲ್ಲಿ ಓದುಗರು ಕರೆದ ಜಾಗಕ್ಕೆ ತೆರಳುವ ವಸುಧೇಂದ್ರ ಅವರು ಕನ್ನಡ ಸಾಹಿತ್ಯವನ್ನು ಕನ್ನಡ ಹೃದಯಗಳತ್ತ ತೆಗೆದುಕೊಂಡು ಹೋಗುವಲ್ಲಿ ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ಹೇಳಿದರು.
ಶಿಕ್ಷಕಿ ಮಮತಾ ಪ್ರಭು, ಅಕ್ಷರ ಅಕಾಡೆಮಿ ನಿರ್ವಾಹಕ ಶ್ರೀನಾಥ್,ಹಾಗೂ ಇತರರು ಹಾಜರಿದ್ದರು.