ಹಾಸನ-ಹಾಸನ-ಬೇಲೂರು ರಸ್ತೆಯ ಕಲ್ಕೆರೆ ಗಡಿಯ ಸಮೀಪದ ತಿರುವಿನಲ್ಲಿ ಇರುವ ಕೆರೆಯ ಏರಿಗೆ ತಡೆಗೋಡೆ ಇಲ್ಲದ ಕಾರಣಕ್ಕೆ ಪದೇ ಪದೇ ಅನಾಹುತಗಳು ಸಂಭವಿಸುತ್ತಿದ್ದು ಸಂಬಂಧಪಟ್ಟವರು ಕೂಡಲೇ ತಡೆಗೋಡೆ ನಿರ್ಮಿಸುವಂತೆ ಹಾಸನ ಜಿಲ್ಲಾ ಯೂಥ್ ಕಾಂಗ್ರೆಸ್ ಉಪಾಧ್ಯಕ್ಷ ರವೀಶ್ ಬಸವಾಪುರ ಮನವಿ ಮಾಡಿಕೊಂಡಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಗುರುವಾರ ಮದ್ಯಾಹ್ನದ ವೇಳೆಗೆ ಕಾರೊಂದು ನಿಯಂತ್ರಣ ತಪ್ಪಿ ಕಲ್ಕೆರೆ ಕೆರೆಗೆ ಬಿದ್ದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಈ ಹಿಂದೆಯೂ ಕೂಡ 2 ಬಾರಿ ಕಾರುಗಳು ಈ ಕೆರೆಗೆ ಬಿದ್ದಿದ್ದು ಒಂದು ಬಾರಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಆ ಅವಘಡ ಸಂಭವಿಸಿದ ಸಂದರ್ಭದಲ್ಲೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಯಾವ ಮುನ್ನೆಚ್ಚೆರಿಕಾ ಕ್ರಮಗಳನ್ನು ಅಧಿಕಾರಿಗಳು ತೆಗೆದುಕೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಬೇಲೂರು – ಹಾಸನ ರಸ್ತೆ ಸಂಪೂರ್ಣ ಗುಂಡಿಬಿದ್ದಿದ್ದು ಇದರಿಂದಲೂ ಸಹ ಈ ರಸ್ತೆಯಲ್ಲಿ ಆಗಿಂದ್ದಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.ಹೀಗಿದ್ದರೂ ಸಹ ಜನ ಪ್ರತಿನಿಧಿನಿಗಳಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ. ಬೇಲೂರು ಹಾಗೂ ಹಾಸನ ವಿಧಾನಸಭಾ ಕ್ಷೇತ್ರಗಳ ಗಡಿ ಭಾಗದಲ್ಲಿರುವ ಈ ಕೆರೆ ಬಹುತೇಕ ರಸ್ತೆಗೆ ಹೊಂದಿಕೊಂಡಂತ್ತಿದ್ದು, ಸಮರ್ಪಕ ರೀತಿಯಲ್ಲಿ ಪೂರ್ಣ ಪ್ರಮಾಣದ ತಡೆ ಗೋಡೆ ಇಲ್ಲದೆ ಇರುವುದು ಹಾಗೂ ಈ ಭಾಗದಲ್ಲಿಯೇ ಹೆದ್ದಾರಿ ಹೆಚ್ಚು ಗುಂಡಿ ಬಿದ್ದಿರುವುದೇ ಅಪಘಾತಕ್ಕೆ ಕಾರಣವಾಗಿದೆ. ಶೀಘ್ರದಲ್ಲಿಯೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸದೆ ಇದ್ದರೆ ಹೆದ್ದಾರಿ ಬಳಿಯೇ ಪ್ರತಿಭಟನೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ರವೀಶ್ ಬಸವಾಪುರ ಎಚ್ಚರಿಕೆಯನ್ನು ನೀಡಿದ್ದಾರೆ.