ಹಾಸನ: ಬಡತನದ ಕಾರಣಕ್ಕೆ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಆರ್ಥಿಕ ಸ್ಥಿತಿವಂತರು ಬಡ ಮಕ್ಕಳಿಗೆ ನೆರವಾಗಬೇಕು ಎಂದು ಸುಜಲಾ ಕಾಲೇಜು ಮುಖ್ಯಸ್ಥ ಲೋಕೇಶ್ ಸಲಹೆ ನೀಡಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿ ಶಿವಪ್ರಸಾದ್ ಅವರಿಗೆ ವೈಯಕ್ತಿಕ ಆರ್ಥಿಕ ನೆರವು ನೀಡಿ ಮಾತನಾಡಿದ ಅವರು, ಬಡ ಕುಟುಂಬದಿಂದ ಬಂದಿರುವ ನನಗೆ ಶಿಕ್ಷಣದ ಮಹತ್ವ ತಿಳಿದಿದೆ. ಹಣಕಾಸಿನ ತೊಂದರೆಯಿಂದ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ನಮ್ಮ ಕಾಲೇಜಿನಿಂದ ಉಚಿತ ಶಿಕ್ಷಣ ನೀಡಲಾಗಿದೆ. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಎಂದರು.
ಈ ವೇಳೆ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಶಶಿಕುಮಾರ್, ಕಾಲೇಜು ಮಂಜುನಾಥ್, ಆಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕ ರವಿಪ್ರಕಾಶ್ ಹಾಜರಿದ್ದರು.