
ಹಾಸನ:ಇಂದಿನ ದಿನದಲ್ಲಿ ಅನೇಕರು ಅನೇಕ ವಂಚನೆಗಳಿಗೆ ಬಲಿಯಾಗಿ ತಮ್ಮ ಜೀವಮಾನದ ಸಂಪಾದನೆಯ ಹಣವನ್ನು ಕಳೆದುಕೊಂಡಿದ್ದಾರೆ. ಆನ್ಲೈನ್ ಗೇಮ್ಗಳು, ಕೆಲವು ಟ್ರೇಡಿಂಗ್ ವ್ಯವಹಾರಗಳು ಜೊತೆಗೆ ಅಕ್ರಮವಾಗಿ ನಡೆಯುವ ಚೀಟಿಗಳಲ್ಲಿ ಹಣ ತೊಡಗಿಸಿ ಹಣ ಕಳೆದುಕೊಂಡಿದ್ದಾರೆ. ಹಣ ಸಂಪಾದನೆ ಎಷ್ಟು ಮುಖ್ಯವೋ ಹಣದ ಉಳಿತಾಯ ಹಾಗೂ ನಿರ್ವಹಣೆಯೂ ಅತಿಮುಖ್ಯ ಎಂದು “ಫ್ರಾಂಕ್ಲಿನ್ ಟೆಂಪಲ್ಟನ್” ಮ್ಯೂಚುಯಲ್ ಫಂಡ್ ಸಂಸ್ಥೆಯ ಕಂಪನಿಯ ತರಬೇತುದಾರ ಸಿ.ಎಸ್. ಕಾರ್ತಿಕ್ ತಿಳಿಸಿದರು.
ಇತ್ತೀಚೆಗೆ ಆಯೋಜಿಸಿದ್ದ ಹಣಕಾಸು ನಿರ್ವಹಣೆ ತರಬೇತಿಯಲ್ಲಿ ಮಾತನಾಡಿ, ನಾವು ಹಣ ಸಂಪಾದನೆ ಪ್ರಾರಂಭಿಸಿದ ನಂತರ ಹಣದ ಉಳಿತಾಯವನ್ನೂ ಮಾಡಬೇಕು.ಅನಿರೀಕ್ಷಿತ ಅಗತ್ಯಕ್ಕೆ, ಮಕ್ಕಳ ಉನ್ನತ ವಿದ್ಯಾಭ್ಯಾಸ, ಮನೆಕಟ್ಟಲು ಹಾಗೂ ಮಕ್ಕಳ ಮದುವೆ ಮಾಡಲು ಸಂಪಾದನೆ ಸಮಯದಲ್ಲೇ ಉಳಿತಾಯ ಹಾಗೂ ನಿರ್ವಹಣೆಯನ್ನೂ ಸಮರ್ಥವಾಗಿ ಮಾಡಿಕೊಳ್ಳಬೇಕು. ಜೀವವಿಮೆ, ರಾಷ್ಟ್ರೀಯ ಉಳಿತಾಯ ಪತ್ರಗಳು, ಬ್ಯಾಂಕ್ಗಳಲ್ಲಿ ನಿಶ್ಚಿತ ಠೇವಣಿ, ಆರ್.ಡಿ ಉಳಿತಾಯ ಮಾಡಲು ಸಹಕಾರಿ ಆದರೂ ಅತಿ ಕಡಿಮೆ ಲಾಭಾಂಶ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಮ್ಯುಚುಯಲ್ ಫಂಡ್ಗಳ ನಿರ್ವಹಣೆ ಹಾಗೂ ಆಯ್ಕೆ ಬಗ್ಗೆ ಅತ್ಯುತ್ತಮ ಜ್ಞಾನ ಇದ್ದವರು, ಜ್ಞಾನ ಇಲ್ಲದಿದ್ದರೂ ಮ್ಯುಚುಯಲ್ ಫಂಡ್ ನಿರ್ವಹಣೆಗಾರರ ಸಲಹೆ ಹಾಗೂ ಮಾರ್ಗದರ್ಶನ ಪಡೆದು ಪ್ರತೀ ತಿಂಗಳೂ ಕನಿಷ್ಟ ಮೊತ್ತವನ್ನು ತೊಡಗಿಸಿ ಹೆಚ್ಚಿನ ಲಾಭಾಂಶ ಪಡೆದಿದ್ದಾರೆ.

ಪ್ರತೀ ತಿಂಗಳೂ 1 ಸಾವಿರದಂತೆ 60 ತಿಂಗಳು ತೊಡಗಿಸಿ ತೊಡಗಿಸಿದ ಮೊತ್ತಕ್ಕೆ ಅತಿಹೆಚ್ಚು ಲಾಭಾಂಶ ಮಾಡಿಕೊಂಡ ಬುದ್ದಿವಂತಿರಿದ್ದಾರೆ. ಈ ಬಗ್ಗೆ ನೀವೂ ಗಮನ ಹರಿಸಿ ಎಂದರು.
100 ಕ್ಕೂ ಹೆಚ್ಚು ವರ್ತಕರಿಗೆ, ಸರಕಾರಿ ನೌಕರರಿಗೆ, ಸಾರ್ವಜನಿಕರಿಗೆ ಮ್ಯೂಚುವಲ್ ಫಂಡ್ ನಿರ್ವಹಣೆಗಾರರು ತರಬೇತಿ ಕೊಡಿಸಿದರು. ತರಬೇತಿ ಪಡೆದ ಕಲವರು ಹಣ ತೊಡಗಿಸಲು ಇಂತಹ ಒಳ್ಳೆಯ ಮಾರ್ಗಗಳು ಇದೆ ಎಂಬುದು ಗೊತ್ತೇ ಇರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
—————-ಸುಕುಮಾರ್