ಹಾಸನ-ದೇಶಸೇವೆ ಮಾಡಲು ಆತ್ಮಸಂಸ್ಕಾರವಿರಬೇಕು.ಅದು ಎಲ್ಲರಿಂದ ಸಾಧ್ಯವಾಗುವ ಸಂಗತಿಯಲ್ಲ. ಶಿಸ್ತು ಮತ್ತು ಶ್ರದ್ಧೆ ಇದ್ದವರು ಮಾತ್ರ ಇಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಅಂತಹ ಯುವಶಕ್ತಿಯಿಂದಲೇ ದೇಶದ ಭವಿಷ್ಯ ನೆಲೆ ನಿಂತಿದೆ ಎಂದು ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ,(ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಬಿ. ಇರ್ಷಾದ್ ಅಭಿಪಾಯಪಟ್ಟರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ಯುವ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡುತ್ತಿದ್ದ ಅವರು,ವ್ಯಕ್ತಿತ್ವವನ್ನು ಸಂಸ್ಕಾರಯುತವಾಗಿ ರೂಪಿಸಿಕೊಂಡವರು ಮಾತ್ರ ಇತಿಹಾಸವಾಗಲು ಸಾಧ್ಯ. ಗಾಂಧೀ, ಅಂಬೇಡ್ಕರ್ ಈ ಸಾಲಿನಲ್ಲಿ ನಮಗೆ ಮಾದರಿಯಾಗಿ ನಿಲ್ಲುತ್ತಾರೆ.
ವಿದ್ಯಾರ್ಥಿ ದೆಸೆಯಿಂದಲೂ ರಾಷ್ಟ್ರೀಯತೆಯನ್ನು ಮೈಗೂಢಿಸಿಕೊಂಡರೆ ಭವಿಷ್ಯದಲ್ಲಿ ಸಾಕಷ್ಟು ಅನುಭವಗಳಿಗೆ ಮತ್ತು ಅವಕಾಶಗಳಿಗೆ ತೆರೆದುಕೊಳ್ಳಬಹುದು. ಆ ನಿಟ್ಟಿನಲ್ಲಿ ಕಾಲೇಜು ಹಂತದಲ್ಲೇ ಎನ್.ಎಸ್.ಎಸ್. ಅತ್ಯಂತ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟಕರಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ನಿರ್ದೇಶಕ ಕಾರ್ತಿಕೇಯನ್ ಮಾತನಾಡಿ ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ಕೌಶಲ್ಯವನ್ನು ಬೆಳೆಸಲು ಸಹಕಾರಿಯಾಗಿದೆ. ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತು ಕಾಳಜಿ ವಹಿಸುವುದರ ಜೊತೆಗೆ ಸಾರ್ವಜನಿಕರಲ್ಲೂ ಅರಿವು ಮೂಡಿಸಲು ಎನ್ಎಸ್ಎಸ್ ಅಭ್ಯರ್ಥಿಗಳು ನೆರವಾಗುತ್ತಾರೆ ಎಂದರು.
ಸoಪನ್ಮೂಲ ವ್ಯಕ್ತಿಯಾಗಿದ್ದ ಭಾಗವಹಿಸಿದ್ದ ಎನ್ಎಸ್ಎಸ್ ಯುವಜನಾಧಿಕಾರಿ ವೈ. ಎಂ. ಉಪ್ಪಿನ್ರವರು ‘ಪಂಚ ಪ್ರಾಣಗಳು’ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಗುಲಾಮಿ ಮನಸ್ಥಿತಿಯಿಂದ ಹೊರಬಂದು ಕ್ರಿಯಾಶೀಲತೆಯಿಂದ ಕೆಲಸ ಮಾಡುವುದರ ಮುಖಾಂತರ ಅಭಿವೃದ್ಧಿ ಭಾರತಕ್ಕೆ ಮುನ್ನುಡಿ ಬರೆಯಿರಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಎಂ. ಬಿ. ಸುರೇಶ್, ಕಾಲೇಜಿನ ಶೈಕ್ಷಣಿಕ ಡೀನ್ ರಾಜು ಡಿ.ಎಸ್. ಪರೀಕ್ಷಾ ನಿಯಂತ್ರಕರಾದ ಡಾ. ಮುರುಳೀಧರ ಕೆ.ಡಿ, ರಾ.ಸೇ.ಯೋ ಘಟಕದ ಅಧಿಕಾರಿಗಳಾದ ಡಾ. ಪಾರ್ಥೇಶ ಕೆ.ವಿ. ಮತ್ತು
ಪವನ್ ಜೆ.ಕೆ, ಪತ್ರಾಂಕಿತ ವ್ಯವಸ್ಥಾಕ ಕೆ.ಟಿ. ಸತ್ಯಮೂರ್ತಿ, ಕನ್ನಡ ಪ್ರಾಧ್ಯಾಪಕರಾದ ಶ್ರೀನಿವಾಸ್, ಅತಿಥಿ ಉಪನ್ಯಾಸಕರಾದ ಮಾಲತಿ, ರಶ್ಮಿ ಎ. ವಿ ಹಾಜರಿದ್ದರು. ನಂದನ್ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ಸ್ವಾಗತಿಸಿದರು, ಐಶ್ವರ್ಯ- ಹೃತಿಕ ಪ್ರಾರ್ಥಿಸಿದರು..