ಹಾಸನ-ಅನುದಾನ-ಬಿಡುಗಡೆ-ಮಾಡದೆ-ಜಿಲ್ಲಾ-ಖಜಾನೆ-ಬಂದ್-ಮಾಜಿ-ಸಚಿವ-ಹೆಚ್.ಡಿ.ರೇವಣ್ಣ-ಆರೋಪ

ಹಾಸನ- ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆದಿರುವ 63 ಇಲಾಖೆಗಳ ಒಟ್ಟು 326 ಕೋಟಿರೂ. ಅನುದಾನ ಬಿಡುಗಡೆ ಮಾಡದೆ ಜಿಲ್ಲಾ ಖಜಾನೆಯನ್ನೇ ಬಂದ್ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ ತಿಂಗಳಿಂದ ಅಧಿಕಾರಿಗಳಿಗೂ ಸಂಬಳ ನೀಡಿಲ್ಲ, ವಾಹನಗಳಿಗೆ ಡಿಸೇಲ್ ಹಾಕಿಸಲು ಹಣ ಇಲ್ಲದ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. 2 ಸಾವಿರ ಬಿಲ್‌ಗಳು ಬಾಕಿ ಉಳಿದಿವೆ ಎಂದು ದೂರಿದರು.


ನಗರದಲ್ಲಿ ಒಟ್ಟು 101 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರೈಲ್ವೆ ಮೇಲೇತುವೆ ಕಾಮಗಾರಿಗೆ ರೈಲ್ವೆ ಇಲಾಖೆಯಿಂದ 34 ಕೋಟಿ ರೂ. ರಾಜ್ಯ ಸರ್ಕಾರದ 67 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಈ ಹಿಂದೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ದೇವೇಗೌಡರು ಪತ್ರ ಬರೆದು ಒತ್ತಾಯ ಮಾಡಿದ ಕಾರಣದಿಂದ ಇದೀಗ ಬಾಕಿ 18 ಕೋಟಿರೂ. ಅನುದಾನ ಬಿಡುಗಡೆಯಾಗಿದೆ ಎಂದರು.


ಮೇಲ್ವೇತುವೆ ಅನುದಾನ ತರುವಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಶ್ರಮವಿದೆ. ರಾಜ್ಯ ಬಜೆಟ್‌ಗೂ ಮೊದಲೇ ಕಾಮಗಾರಿಗೆ ಹಣ ನೀಡಿ ಎಂದು ದೇವೇಗೌಡರು ದನಿ ಎತ್ತಿದ್ದರ ಪರಿಣಾಮದ ಫಲವಾಗಿ ಅನುದಾನ ಬಿಡುಗಡೆಯಾಗಿದೆ ಎಂದು ಪರೋಕ್ಷವಾಗಿ ಸಂಸದ ಶ್ರೇಯಸ್‌ ಪಟೇಲ್ ಅವರ ಹೇಳಿಕೆಗೆ ತಿರುಗೇಟು ನೀಡಿದರು.


ನನಗೆ ಬಜೆಟ್ ಪ್ರತಿ ಓದಲು ಬರುವುದಿಲ್ಲ, ರಾಜ್ಯ ಬಜೆಟ್‌ನಲ್ಲಿ ಹಾಸನಕ್ಕೆ ಎಷ್ಟು ಅನುದಾನ ಮೀಸಲಿಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಹಾಸನ ನಗರಸಭೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪ ಹಿಂದಿನ ಸರ್ಕಾರದ ಅವಧಿಯಲೇ ಆಗಿತ್ತು. ಈ ಬಜೆಟ್‌ನಲ್ಲಿ ಯಾವುದೇ ರೀತಿಯ ಅನುದಾನ ನೀಡಿಲ್ಲ. ಬಜೆಟ್ ಬುಕ್‌ನಲ್ಲಿ ಹಾಸನ ಜಿಲ್ಲೆಗೆ ಎಷ್ಟು ಅನುದಾನ ನೀಡಿದ್ದಾರೆ ಎಂದು ತಿಳಿಸಲಿ ಎಂದು ಸಂಸದರ ಹೆಸರು ಹೇಳದೆಯೇ ಆಗ್ರಹಿಸಿದರು.


ನಿನ್ನೆ ಸುದ್ದಿಗೋಷ್ಟಿ ನಡೆಸಿದ ಸಂಸದ ಶ್ರೇಯಸ ಪಟೇಲ್, ಬಜೆಟ್ ಪ್ರತಿ ಓದಿ ಮಾತನಾಡಲಿ, ಸುಳ್ಳು ಆರೋಪ ಮಾಡುವುದು ಬೇಡ ಎಂದು ಪರೋಕ್ಷವಾಗಿ ರೇವಣ್ಣ ಅವರಿಗೆ ಟಾಂಗ್ ನೀಡಿದ್ದರು.


ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ತೆರಿಗೆ ಹಣವನ್ನು ಗ್ಯಾರಂಟಿ ಅನುಷ್ಠಾನ ಸಮಿತಿಗೆ ಸಂಬಳದ ರೂಪದಲ್ಲಿ ನೀಡುತ್ತಿದೆ. ಇದಕ್ಕಾಗಿ ವಾರ್ಷಿಕವಾಗಿ 16 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಹಣ ನೀಡುವುದಾದರೆ ಕಾಂಗ್ರೆಸ್‌ನಿಂದಲೇ ನೀಡಲಿ ಎಂದು ಆಗ್ರಹಿಸಿದರು. ಸಾರ್ವಜನಿಕರ ತೆರಿಗೆ ಹಣವನ್ನುಏಕೆ ದುರ್ಬಳಕೆ ಮಾಡಿಕೊಳ್ಳಬೇಕು. ಆನ್‌ಲೈನ್ ಮೂಲಕವೇ ಗ್ಯಾಂರಟಿ ಯೋಜನೆ ನಿರ್ವಹಣೆಯಾಗುತ್ತಿರುವಾಗ ಸಮಿತಿ ಏಕೆ ಬೇಕೆಂದು ರೇವಣ್ಣ ಪ್ರಶ್ನಿಸಿದರು.

Leave a Reply

Your email address will not be published. Required fields are marked *

× How can I help you?