ಹಾಸನ-ಜಿಲ್ಲೆಯಲ್ಲಿನ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಹೇಮಾವತಿ ಪ್ರತಿಮೆ ಬಳಿ ಧರಣಿ ಪ್ರತಿಭಟನೆ ನಡೆಸಿದರು ಯಾವ ಅಧಿಕಾರಿಗಳು ಇತ್ತ ತಿರುಗಿ ನೋಡಿರಲಿಲ್ಲ.ಶನಿವಾರ ರಸ್ತೆ ತಡೆ ನಡೆಸಿ ಉಗ್ರ ಪ್ರತಿಭಟನೆಗೆ ಸಿದ್ಧತೆ ಕೈಗೊಳ್ಳುತ್ತಿದ್ದಂತೆ ಅಪರ ಜಿಲ್ಲಾಧಿಕಾರಿ ಶಾಂತಲಾ ಧರಣಿ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸಿ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂದು ಜಯಕರ್ನಾಟಕ ಜಿಲ್ಲಾಧ್ಯಕ್ಷ ಎಂ.ಕೆ.ಆರ್ ಸೋಮೇಶ್ ತಿಳಿಸಿದರು.
ಜಿಲ್ಲೆಯ ಬೇಲೂರು-ಆಲೂರು-ಸಕಲೇಶಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಆದಷ್ಟು ಬೇಗ ಸ್ಥಳಾಂತರ ಅಥವಾ ದೂರದ ಕಾಡಿಗೆ ಶಾಶ್ವತವಾಗಿ ಓಡಿಸುವಂತೆ ಆಗ್ರಹಿಸಿ ಹಾಸನ ಜಿಲ್ಲಾ ಜಯ ಕರ್ನಾಟಕ ಸಂಘಟನೆಯಿಂದ ಹೇಮಾವತಿ ಪ್ರತಿಮೆ ಬಳಿ ಕಳೆದ ನಾಲ್ಕು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿತ್ತು.ಇಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಅಪರ ಜಿಲ್ಲಾಧಿಕಾರಿ ಶಾಂತಲಾರವರಿಗೆ ಮನವಿ ಪತ್ರವನ್ನು ಸಲ್ಲಿಸಿ ಎಂ.ಕೆ.ಆರ್ ಸೋಮೇಶ್ ಮಾಧ್ಯಮದವರೊಂದಿಗೆ ಮಾತನಾಡಿದರು.
ಹಾಸನ ಜಿಲ್ಲೆಯ ಮಲೆನಾಡು ಬಾಗದಲ್ಲಿ ಎರಡು ದಶಕಗಳಿಂದಲೂ ಕಾಡಾನೆಗಳ ಸಮಸ್ಯೆ ಕಾಡುತ್ತಿದೆ.ಸರ್ಕಾರ, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆನೆಗಳ ದಾಳಿಗೆ ಸಾಕಷ್ಟು ಅಮಾಯಕ ಜೀವಗಳು ಬಲಿಯಾಗಿವೆ.ಜೊತೆಗೆ ಬಹಳಷ್ಟು ಜನ ಗಾಯಗೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಾಸನ ಜಿಲ್ಲೆಯ ಬೇಲೂರು-ಆಲೂರು-ಸಕಲೇಶಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೂರಾರು ಕಾಡಾನೆಗಳು ಬೀಡು ಬಿಟ್ಟು ರೈತರ, ಬೆಳೆಗಾರರ ತೋಟ, ಜಮೀನುಗಳಿಗೆ ನುಗ್ಗುತ್ತಿರುವುದರಿಂದ ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ನಾಶವಾಗಿ ಹೋಗುತ್ತಿದೆ.ಆನೆಗಳು ಜನ ವಸತಿ ಪ್ರದೇಶಗಳ ಆಸುಪಾಸಿನಲ್ಲೆ ಬೀಡು ಬಿಟ್ಟು ಗ್ರಾಮದ ಮನೆ ಮುಂದಿನ ರಸ್ತೆಯಲ್ಲೆ ಓಡಾಡುತ್ತಿವೆ.ಇದರಿಂದ ಎಲ್ಲಿ ಅವಘಡ ಸಂಭವಿಸುತ್ತದೆಯೋ ಎಂಬ ಆತಂಕ ಮತ್ತು ಜೀವ ಭಯದಲ್ಲೆ ಜನರು ದಿನ ಕಳೆಯುವಂತಾಗಿದೆ.ಕೂಲಿ ಕಾರ್ಮಿಕರು ತೋಟದ ಕೆಲಸಗಳಿಗೆ ಹೋಗಲಾಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮಲೆನಾಡಿನಲ್ಲಿ ಮತ್ತಷ್ಟು ಬೆಳೆ ನಾಶ ಮತ್ತು ಜೀವ ಹಾನಿಯಾಗುವ ಮುನ್ನವೇ ಸರ್ಕಾರ, ಜಿಲ್ಲಾಡಳಿತ, ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ತಕ್ಷಣವೇ ಕಾಡಾನೆಗಳನ್ನು ಹಿಡಿದು ಅಥವಾ ದೂರದ ಕಾಡಿಗೆ ಓಡಿಸಲು ಕ್ರಮ ಕೈಗೊಳ್ಳ ಬೇಕೆಂದು ಇಂದು ಮನವಿ ಪತ್ರವನ್ನು ನೀಡಲಾಗಿದೆ.
ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಿ ಸಂಘಟನೆಯ ಹಿರಿಯರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.ಶನಿವಾರವೂ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ ಎಂದರು.
ಈ ಸಂದರ್ಭ ಬೇಲೂರು ತಾಲೂಕು ಅಧ್ಯಕ್ಷ ಎಸ್.ಎಂ.ರಾಜು, ಆಲೂರು ತಾಲೂಕು ಅಧ್ಯಕ್ಷ, ಸಂದೇಶ್,ಕಾರ್ಯಾಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಇತರರಿದ್ದರು.
ಕಾಡಾನೆಗಳ ಉಪಟಳಕ್ಕೆ ಶಾಶ್ವತ ಪರಿಹಾರಕ್ಕೆ ಏನೇನು ಕ್ರಮ ಕೈಗೊಳ್ಳಬೇಕೋ ಅದಕ್ಕೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಸಂಘಟನೆಯವರು ನೀಡಿರುವ ಮನವಿ ಪತ್ರವನ್ನು ಮುಖ್ಯಮಂತ್ರಿಗಳು ಮತ್ತು ಅರಣ್ಯ ಸಚಿವರಿಗೆ ಕಳುಹಿಸಿ ವೈಯಕ್ತಿಕವಾಗಿಯೂ ಮಾತನಾಡಿ ಸಮಸ್ಯೆ ಪರಿಹರಿಸುವುದಕ್ಕೆ ಮುಂದಾಗಲಾಗುವುದು.
—————ಶಾಂತಲಾ ಅಪಾರ ಜಿಲ್ಲಾಧಿಕಾರಿಗಳು