ಹಾಸನ – ಮಾದಕ ವಸ್ತುಗಳ ಸೇವನೆ, ಸಾಗಾಟ ಹಾಗೂ ಮಾರಾಟ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ ದುಶ್ಚಟಗಳಿಂದ ಯುವ ಪೀಳಿಗೆ ದೂರವಿರಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಅವರು ತಿಳಿಸಿದ್ದಾರೆ.
ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಸನ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ವಿಚಾರ ಸಂಕಿರಣವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ವಾರ್ಷಿಕವಾಗಿ 250 ಕೋಟಿ ರೂ ಮೌಲ್ಯದ ಮದ್ಯ ಮಾರಾಟವಾಗುತ್ತಿದೆ ಮದ್ಯ ಸೇವಿಸಿದ ವ್ಯಕ್ತಿ ತನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಅದರ ನಾಲ್ಕು ಪಟ್ಟು ಹಣ ಖರ್ಚು ಮಾಡಬೇಕೆಂದು ಸಂಶೋಧನೆಗಳು ಹೇಳುತ್ತವೆ ಎಂದರು.
ಗಾಂಜಾ, ಡ್ರಗ್ಸ್ನಂತಹ ಪ್ರಕರಣದಲ್ಲಿ ಜೈಲು ಸೇರಿದರೆ ಮೊದಲೆಲ್ಲ ಆರು ತಿಂಗಳಲ್ಲಿ ಜಾಮೀನು ಸಿಗುತ್ತಿತ್ತು. ಈಗ ಮಾದಕ ವಸ್ತುಗಳ ಸಾಗಾಟ ಹಾಗು ಮಾರಾಟ ನಿಷೇಧ ಕಾಯ್ದೆ ಸೆಕ್ಷನ್ 51 ಹಾಗು 52 ಅನ್ನು ಬಲಿಷ್ಠಗೊಳಿಸಲಾಗಿದೆ. ಸುಲಭವಾಗಿ ಜಾಮೀನು ಸಿಗುತ್ತದೆಂಬ ತಪ್ಪು ಕಲ್ಪನೆಯಿಂದ ಯುವಕರು ಹೊರಬರಬೇಕು ಎಂದು ಎಚ್ಚರಿಕೆ ನೀಡಿದರು.
ದುಶ್ಚಟಗಳಿಂದ ದೂರವಿರುವುದು ಒಳ್ಳೆಯ ಕೆಲಸ ಆಧುನಿಕತೆ ಬೆಳೆದಂತೆ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಪ್ರಾಪ್ತ ಯುವಕರಿಗೆ ಬೈಕ್ ಕೊಡಿಸುವುದು ಪೋಷಕರ ತಪ್ಪು. 18 ವರ್ಷದೊಳಗಿನ ಯುವಕರು ನಗರದ ಮುಖ್ಯ ರಸ್ತೆಯಲ್ಲಿ ವಿಲೀಂಗ್ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಹಿಮ್ಸ್ನ ಮನೋವೈದ್ಯ ಡಾ|| ಪುನೀತ್ ಅವರು ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರಪಂಚದ 8೦೦ ಕೋಟಿ ಜನರಲ್ಲಿ ೨೫೦ ಕೋಟಿ ಜನರು ಮದ್ಯ ಸೇವನೆ, 15೦ ಕೋಟಿ ಜನರು ತಂಬಾಕು ಪದಾರ್ಥ, 6೦ ಕೋಟಿ ಜನರು ಗಾಂಜಾ, ಡ್ರಗ್ಸ್ನಂತಹ ಅಮಲು ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದಾರೆ.
ಮದ್ಯ ಅಥವಾ ಗಾಂಜಾ ಪದಾರ್ಥವನ್ನು ಕ್ಷಣಿಕ ಸುಖಕ್ಕಾಗಿ, ಸ್ನೇಹಿತರ ಒತ್ತಾಯ, ಸೆಲೆಬ್ರಿಟಿಗಳಿಂದ ಪ್ರೇರಣೆಯಾಗಿ ಸೇವಿಸಲು ಪ್ರಾರಂಭಿಸುತ್ತಾರೆ. ನಂತರದ ದಿನಗಳಲ್ಲಿ ಅದು ಚಟವಾಗಿ ಪರಿವರ್ತನೆ ಹೊಂದುತ್ತದೆ. ದುಶ್ಚಟಕ್ಕೆ ದಾಸರಾಗುವ ಮೊದಲು ಸಾಧಕ-ಬಾಧಕ ಅರಿಯಬೇಕು ಎಂದರು.

ಮಾದಕ ವಸ್ತುಗಳ ಸೇವನೆಯಿಂದ ಅಪೌಷ್ಠಿಕತೆ, ಅನಾರೋಗ್ಯ ಒತ್ತಡಕ್ಕೆ ಸಿಲುಕಿ ತಮ್ಮ ಕುಟುಂಬ ಹಾಗೂ ತಾವು ಕೂಡ ನಷ್ಠ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ಕೆಟ್ಟ ಹವ್ಯಾಸಗಳಿಗೆ ಅಂಟಿಕೊಳ್ಳುವುದು ಎಂದರೆ ಕೇವಲ ಡ್ರಗ್ಸ್, ಗಾಂಜಾ ಸೇವಿಸುವುದು ಮಾತ್ರವಲ್ಲ. ಅತಿಯಾದ ಮೊಬೈಲ್ ಬಳಕೆಯು ದುರಾಭ್ಯಾಸವಾಗಿದೆ. ಸಾಮಾಜಿಕ ಜಾಲತಾಣ ಬಳಕೆ, ಇಂಟರ್‌ನೆಟ್, ಗೇಮಿಂಗ್ ಹಾಗೂ ಜೂಜು ಯುವಕರನ್ನು ಹಾಳು ಮಾಡುತ್ತಿದೆ ಎಂದರು.
ಮಕ್ಕಳಲ್ಲಿ ಕೀಳರಿಮೆ ಭಾವ ಹುಟ್ಟದಂತೆ ಪೋಷಕರು ಎಚ್ಚರ ವಹಿಸಬೇಕು. ತಂದೆ-ತಾಯಿ ಇಬ್ಬರೂ ಎಚ್ಚರವಹಿಸದಿದ್ದರೆ ಕುಟುಂಬಕ್ಕೆ ಬೇಡವಾಗಿದ್ದೇನೆ ಎಂಬ ಮನೋಭಾವ ಮಕ್ಕಳಲ್ಲಿ ಬೆಳೆಯುತ್ತದೆ. ಇಂತಹ ಸಮಯದಲ್ಲಿ ಸ್ನೇಹಿತರ ಜೊತೆಗೆ ಸೇರಿ ಆರಂಭಿಸುವ ಕುಡಿತದ ಅಭ್ಯಾಸ ಜೀವನವನ್ನೇ ಅಪಾಯಕ್ಕೆ ಸಿಲುಕಿಸುತ್ತದೆ ಎಂದರು.
ಸರ್ಕಾರಿ ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಗಿರೀಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಯವರು ಬೆಳೆಸಿಕೊಂಡಿರುವ ನಡೆ ,ನುಡಿ, ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಉತ್ತಮ ಮಾರ್ಗದಲ್ಲಿ ನಡೆಯುವ ಮೂಲಕ ದೇಶಕ್ಕೆ ಸಂಪತ್ತಾಗಿ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಡ್ರಗ್ಸ್, ಅಫೀಮು, ಗಾಂಜಾದಂತಹ ದಿಕ್ಕು ತಪ್ಪಿಸುವ ಚಟಗಳಿಗೆ ದಾಸರಾಗಬೇಡಿ, ಅವುಗಳನ್ನು ಮಾಡುತ್ತಿರುವವರಿಗೆ ತಿಳಿಹೇಳಿ ಉತ್ತಮ ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡಿ ಈ ನಿಟ್ಟಿನಲ್ಲಿ ಯುವ ಪೀಳಿಗೆ ಸಾಗಿ ಎಂದು ತಿಳಿಸಿದರು.
ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮೀನಾಕ್ಷಮ್ಮ ಅವರು ಸ್ವಾಗತಿಸಿ, ಕಾರ್ಯಕ್ರಮದಲ್ಲಿ ಪ್ರ‍್ರಾಸ್ತಾವಿಕ ನುಡಿಗಳನ್ನಾಡಿದರು.