ಹಾಸನ-ಮೈಕ್ರೋ ಫೈನಾನ್ಸ್ ಗಳು-ಸಾಲ-ವಸೂಲಾತಿಗೆ-ಸರ್ಕಾರದ-ಅಧ್ಯಾದೇಶ-ಕಟ್ಟುನಿಟ್ಟಾಗಿ-ಪಾಲಿಸಲು-ಸೂಚನೆ

ಹಾಸನ : ಸರ್ಕಾರವು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ ೨೦೨೫ನ್ನು ಫೆಬ್ರವರಿ 12 ರಿಂದ ಜಾರಿಗೊಳಿಸಿದ್ದು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡುವ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ಸಾಲ ವಸೂಲಾತಿ ಸಂದರ್ಭದಲ್ಲಿ ಅಧ್ಯಾದೇಶದ ಮಾರ್ಗ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ 2025 ರ ಸಂಬಂಧ ಮೈಕ್ರೋ ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳು ಹಾಗೂ ಲೇವಾದೇವಿಗಾರರ ಸಭೆ ನಡೆಸಿ ಮಾತನಾಡಿದ ಅವರು ಸಾಲ ವಸೂಲಿಗೆ ಸರ್ಕಾರದ ಅಧ್ಯಾದೇಶದಲ್ಲಿ ರುವಂತೆ ನಿಯಮಗಳನ್ನು ತಪ್ಪದೆ ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶನ ನೀಡಿದರು.

ಸಾಲ ವಸೂಲಾತಿ ವೇಳೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆ ನೀಡುವುದು, ಸಾಲಗಾರರು ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಹೋಗಲು ಮಾನಸಿಕ ಹಿಂಸೆ ನೀಡಿದ್ದಲ್ಲಿ ಜಾಮೀನು ರಹಿತವಾದ ಪ್ರಕರಣವನ್ನು ದಾಖಲಿಸಲು ಅಧ್ಯಾದೇಶದಲ್ಲಿ ಅವಕಾಶವಿದೆ ಎಂದು ಎಚ್ಚರಿಕೆ ನೀಡಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಹಾಗೂ ಲೇವಾದೇವಿಗಾರರು ಸಾಲಗಾರನಿಂದ ಯಾವುದೇ ರೀತಿ ಭದ್ರತೆಯನ್ನು ಕೋರುವಂತಿಲ್ಲ , ಒಂದು ವೇಳೆ ಸಾಲಗಾರನಿಂದ ಈ ಆದ್ಯಾ ದೇಶ ಜಾರಿಯಾಗುವ ಹಿಂದಿನ ದಿನದಂದು ಭದ್ರತೆಯನ್ನು ಪಡೆದಿದ್ದರೆ ಸಾಲಗಾರನ ಪರವಾಗಿ ತಕ್ಷಣದಿಂದಲೇ ಬಿಡುಗಡೆಗೊಳಿಸಬೇಕು ಎಂದು ತಿಳಿಸಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಾಗೂ ಲೇವಾದೇವಿಗಾರರು ಈ ನಿಯಮಗಳನ್ನು ಉಲ್ಲಂಘಿಸಿದರೆ ಹತ್ತು ವರ್ಷಗಳವರೆಗೂ ವಿಧಿಸಬಹುದಾದ ಶಿಕ್ಷೆಗೆ ೫ ಲಕ್ಷ ರೂಪಾಯಿವರೆಗೆ ವಿಸ್ತರಿಸಬಹುದಾದ ದಂಡವನ್ನು ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗುವ ವರಿಗೆ ಜಾಮೀನುರಹಿತವಾಗಿರುತ್ತದೆ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಅವರು ಮಾತನಾಡಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಾಗೂ ಲೇವಾದೇವಿಗಾರರು ಈ ನಿಯಮನ್ನು ಉಲ್ಲಂಘಿಸಿದರೆ ಡಿವೈಎಸ್ಪಿ ಮೇಲಿನ ಹಂತದ ಅಧಿಕಾರಿ ಯಾವುದೇ ದೂರು ಪಡೆಯದೆ ಸುಮೊಟೊ ಪ್ರಕರಣ ದಾಖಲಿಸಬಹುದು ಎಂದು ತಿಳಿಸಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಲತಾ ಸರಸ್ವತಿ ಅವರು ಆರ್.ಬಿ.ಐ ಮಾರ್ಗಸೂಚಿಗಳನ್ನು ವಿವರಿಸಿದರು.

ಸಹಕಾರ ಇಲಾಖೆ ಉಪ ನಿಬಂದಕರಾದ ಕಿರಣ್ ಕುಮಾರ್ ಹಾಗೂ ವಿವಿಧ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

× How can I help you?