ಹಾಸನ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೂತನ ಜಿಲ್ಲಾ ಕಚೇರಿ ಉದ್ಘಾಟನಾ ಕಾರ್ಯಕ್ರಮ ಏ.4 ರಂದು ನಡೆಯಲಿದೆ.ಅಂದು ಬೆಳಗ್ಗೆ 10.30 ಗಂಟೆಗೆ ನಗರದ ತಣ್ಣೀರು ಹಳ್ಳ ಮಠದ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷರಾದ ಶಂಕರ ಬಿದರಿ ಅವರು ಹೊಸ ಕಚೇರಿ ಉದ್ಘಾಟನೆ ಮಾಡಲಿದ್ದಾರೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಪರಮೇಶ್ ಇಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಜಿಲ್ಲಾ ಘಟಕದ ಗೌರವಾಧ್ಯಕ್ಷರೂ ಆಗಿರುವ ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನಸ್ವಾಮೀಜಿ, ತಣ್ಣೀರು ಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ ಮತ್ತು ಜವೇನಹಳ್ಳಿ ಮಠದ ಶ್ರೀಸಂಗಮೇಶ್ವರ ಸ್ವಾಮೀಜಿ ಅವರು ದಿವ್ಯ ಸಾನಿಧ್ಯವಹಿಸಲಿದ್ದಾರೆ ಎಂದರು.
ರಾಷ್ಟ್ರೀಯ ಮತ್ತು ರಾಜ್ಯ ಘಟಕಗಳ ಉಪಾಧ್ಯಕ್ಷರು, ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು, ಸಮುದಾಯದ ಹಾಲಿ ಹಾಗೂ ಮಾಜಿ ಶಾಸಕರು, ಪದಾಧಿಕಾರಿಗಳು ಹಾಗೂ ಎಲ್ಲ ತಾಲೂಕು ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಮುಂದಿನ ದಿನಗಳಲ್ಲಿ ನಮ್ಮ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಿ ಆ ಮೂಲಕ ಸಮುದಾಯದ ಬಡ ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಸೆಂಟರ್ ತೆರೆಯುವ ಉದ್ದೇಶ ಇದೆ ಎಂದು ಪರಮೇಶ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಪದಾಧಿಕಾರಿ ಗಳಾದ ರವಿ ಕುಮಾರ್, ಕಟ್ಟಾಯ ಶಿವಕುಮಾರ್, ವಿಜಯಕುಮಾರ್, ಯೋಗೇಶ್, ಅಜಿತ್ ಮೊದಲಾದವರಿದ್ದರು.
– ಮಾಲಾ ಹಾಸನ