ಹಾಸನ: ಸರ್ಕಾರಿ ಕಛೇರಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ, ಹೊರಗುತ್ತಿಗೆಯ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿರುವುದು ನೆನ್ನೆ ಮೊನ್ನೆಯ ಸಂಗತಿಯೇನಲ್ಲ.
ಮೊದಮೊದಲು ದಿನಗೂಲಿ ನೌಕರಿ ಹೆಸರಿನಲ್ಲಿ, ತಾತ್ಕಾಲಿಕ ಹುದ್ದೆ ಸೃಷ್ಟಿಸಿ ಸರ್ಕಾರಿ ಕಛೇರಿಯಲ್ಲಿ ಉದ್ಯೋಗವನ್ನು ನೀಡಲಾಗುತ್ತಿತ್ತು. ಇತ್ತೀಚಿಗೆ ಈ ದಿನಗೂಲಿ ನೌಕರರ ನೇಮಕಾತಿಯನ್ನು ಏಜೆನ್ಸಿ ಗಳ ಮೂಲಕ ಮಾಡಲಾಗುತ್ತಿದ್ದು, ಸರ್ಕಾರಿ ಕಛೇರಿಗಳಲ್ಲಿ ಅಗತ್ಯ ಇರುವ ಒಟ್ಟು ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲಾಗುತ್ತಿದೆ.
ಸರ್ಕಾರದ ಇಲಾಖೆಗಳು ನೇರವಾಗಿ ಗುತ್ತಿಗೆ ತೆಗೆದುಕೊಂಡರೆ ಮುಂದೊಂದು ದಿನ ಖಾಯಂ ಮಾಡಬೇಕಾಗಬಹುದು; ಸಂಬಳ-ಸಾರಿಗೆ, ಭತ್ಯೆ ಮತ್ತಿತರೆ ಸೌಲಭ್ಯ, ಪಿಂಚಣಿ ಹೀಗೆ ಹಲವಾರು ಬಗೆಯಲಿ ಆರ್ಥಿಕ ಹೊರೆ ಬೀಳುವುದರಿಂದ ಪಾರಾಗಲು ಈ ಹೊರಗುತ್ತಿಗೆ ಎಂಬ ಪ್ರಕ್ರಿಯೆ ಚಾಲ್ತಿಗೆ ಬಂದಿದೆ.
ಕಾರ್ಮಿಕರನು ಒದಗಿಸುವ ಏಜೆನ್ಸಿಗಳು ಸರ್ಕಾರದ ಈ ಸಂದಿಗ್ಧತೆಯ ಸ್ಥಿತಿಯನ್ನು ಬಹು ಕೃತ್ರಿಮತೆಯ ರೂಪದಲ್ಲಿ ಶೋಷಣೆಯ ಮೂಲಕ ತಮ್ಮ ದುರಾಸೆಯ ಲಾಭಕ್ಕೆ ಬಳಸಿಕೊಳ್ಳುತ್ತಿವೆ. ಇಲ್ಲಿ ಹುದ್ದೆಗೆ ಅಗತ್ಯವಾಗಿರುವ ವಿದ್ಯಾರ್ಹತೆ ಜತೆಯಲ್ಲಿ ಹಣದ ಒಳಹರಿವು ಹೆಚ್ಚಾಗುತ್ತಿರುವುದು ವಿಷಾದವೇ ಸರಿ.
ಹೌದು….! ಇತ್ತೀಚೆಗೆ ಹೊರಗುತ್ತಿಗೆ ಆಧಾರದಿಂದ ನೇಮಕ ಮಾಡಿಕೊಳ್ಳಲು ಮಧ್ಯವರ್ತಿಗಳಿಗೆ ಲಂಚವನ್ನು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಜನಸಾಮಾನ್ಯರಿಗೆ ಒಂದಿಷ್ಟು ಸೌಲಭ್ಯ ವನ್ನು ಕೊಟ್ಟರು, ಈ ಮಧ್ಯವರ್ತಿಗಳು ಅಲ್ಲೂ ಸಹ ತನ್ನ ಕಮಿಷನ್ ಪಡೆದೆ ತೀರುತ್ತಾರೆ.ದೇವರು ಕೊಟ್ಟರು ಪೂಜಾರಿ ಕೊಡನು ಎನ್ನುವ ಮಾತಿನಂತಾಗಿದೆ ಪ್ರಸ್ತುತ ಸ್ಥಿತಿ. ಇಂತದೊಂದು ಘಟನೆ ಸಕಲೇಶಪುರ ತಾಲ್ಲೂಕಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಸರ್ಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಹಾಸನ ಈ ಕಛೇರಿ ವ್ಯಾಪ್ತಿಯ ಅರಸೀಕೆರೆ/ಬೇಲೂರು/ಸಕಲೇಶಪುರ ತಾಲ್ಲೂಕುಗಳ ಅಧೀನ ಕಛೇರಿ / ಆಸ್ಪತ್ರೆಗಳಿಗೆ ಖಾಲಿ ಇರುವ ವಿವಿದ ವೃಂದದ ಒಟ್ಟು 88 ಗ್ರೂಪ್-ಡಿ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವಂತೆ ಆದೇಶ ಹೊರಡಿಸಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಏಜೆನ್ಸಿಗಳು ಹಾಗೂ ಮಧ್ಯವರ್ತಿಗಳು ಹಾಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸಕ್ಕಿರುವ ನೌಕರರಿಂದ ರಿನಿವಲ್ ಅಮೌಂಟ್ ಎಂದು 3000 ಹಣ ಕಲೆಕ್ಟ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಷ್ಟೇ ಅಲ್ಲದೇ ಹೊಸಬರನ್ನು ನೇಮಕ ಮಾಡಿಕೊಳ್ಳುವಾಗಲೂ 3 – 4 ತಿಂಗಳ ಸಂಬಳದ ಹಣವನ್ನು ಮಧ್ಯವರ್ತಿ ಪಡೆದು ನಂತರ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವ ಹೊಸ ಟ್ರೆಂಡ್ ಕ್ರಿಯೆಟ್ ಆಗಿದೆ. ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಏಜೆನ್ಸಿಗಳು ಪ್ರತಿ ತಿಂಗಳ ಸಂಬಳವನ್ನು ಸಹ ಸರಿಯಾದ ಸಮಯಕ್ಕೆ ಕೊಡದೆ ಸಿಬ್ಬಂದಿಗಳನ್ನು ಶೋಷಣೆಯನ್ನು ಮಾಡುತ್ತಿದೆ. ಇನ್ನೂ ಈ ಸಂಬಂಧ ತಾಲೂಕು ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಹಾಗೂ ಜನಪ್ರತಿನಿಧಿಗಳಾಗಲಿ ಗಮನ ಹರಿಸದೇ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ದುಡಿದು ತಿನ್ನುವವರ ಸ್ಥಿತಿ ಖಾಲಿ ಕೈಯ್ಯಲ್ಲಿ ಹಿಡಿದವರಂತೆ, ಕೆಲಸ ಮಾಡದ, ಮಧ್ಯವರ್ತಿಗಳು, ಸದಾ ಉಂಡ ಹೆಬ್ಬಾವಿನಂತೆ ದೇಶದ ಸ್ಥಿತಿಯಾಗಿರುವುದು ವಿಪರ್ಯಾಸವೇ ಸರಿ.
- ಮಾಲಾ, ಹಾಸನ