ಹಾಸನ : ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಸಾರ್ವಜನಿಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಹೇಮಾವತಿ ಅವರು ತಿಳಿಸಿದ್ದಾರೆ.
ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಲೋಕ್ ಅದಾಲತ್ ಕುರಿತು ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಮಾರ್ಚ್ 8 ರಂದು ಹಾಸನ ಜಿಲ್ಲಾದ್ಯಂತ ಎಲ್ಲಾ ತಾಲೂಕುಗಳನ್ನೊಳಗೊಂತೆ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ ಎಂದು ತಿಳಿಸಿದರು.
ಹಾಸನದ ಎಲ್ಲಾ ನ್ಯಾಯಾಲಯಗಳಲ್ಲಿ ಎಲ್ಲಾ ವಿಧದ ಒಟ್ಟು 90,476 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಬಾಕಿ ಇದ್ದು, 3242 ಕ್ಕೂ ಹೆಚ್ಚಿನ ಪ್ರಕರಣಗಳು ರಾಜಿ ಪ್ರಕ್ರಿಯೆಗಾಗಿ ಗುರುತಿಸಲಾಗಿದೆ ಎಂದು ತಿಳಿಸಿದರು.
ರಾಜಿ ಸಂಧಾನಕ್ಕಾಗಿ ಎಲ್ಲಾ ರೀತಿಯ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನೊಳಗೊಂಡಂತೆ ಒಟ್ಟು 1972 ಪ್ರಕರಣಗಳಲ್ಲಿ ಪೂರ್ವ ಸಂದಾನ ಪ್ರಕ್ರಿಯೆ ನಡೆಸಲಾಗಿದ್ದು, ಇದುವರೆಗೂ ಒಟ್ಟು 418 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ತಿಳಿಸಿದರು.

ಸದರಿ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಬಾಕಿ ಇರುವ ಎಲ್ಲಾ ವಿಧದ ಸಿವಿಲ್ ವ್ಯಾಜ್ಯಗಳು, ಬಗೆಹರಿಸಬಹುದಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಮೋಟಾರು ವಾಹನ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು,ಕಂದಾಯ ಪ್ರಕರಣಗಳು,ಜನನ ಮತ್ತು ಮರಣ ನೊಂದಣಿ ಪ್ರಕರಣಗಳು, ಜೀವನಾಂಶ ಪ್ರಕರಣಗಳು ಹಾಗೂ ಇನ್ನಿತರ ಲಘು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತು ವ್ಯಾಜ್ಯ ಪೂರ್ವ ಬ್ಯಾಂಕ್ ಸಾಲ ಮರುಪಾವತಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದ್ಧು, ಸಂಬಂಧಪಟ್ಟ ಕಕ್ಷಿದಾರರು ವಕೀಲರ ಮೂಲಕ ಅಥವಾ ಖುದ್ದಾಗಿ ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರಾಜಿ ಪ್ರಕ್ರಿಯೆಯಿಂದ ಸಮಯ,ಹಣ ಉಳಿತಾಯವಿಗುತ್ತದೆ ಜೊತೆಗೆ ಕಕ್ಷಿದಾರರ ನಡುವಿನ ಬಾಂಧವ್ಯ ವೃದ್ಧಿಯಾಗುತ್ತದೆ ಎಂದರು.
ಪ್ರತಿ ದಿನ ಪೂರ್ವ ಸಂದಾನದ ಬೈಠಕ್ ಗಳನ್ನು ಎಲ್ಲಾ ನ್ಯಾಯಾಲಯಗಳಲ್ಲೂ ನಡೆಸಲಾಗುತ್ತಿದ್ದು, ಕಕ್ಷಿದಾರರು ತಮ್ಮ ವಕೀಲರೊಂದಿಗೆ ಅಥವಾ ನೇರವಾಗಿ ನ್ಯಾಯಾಲಯಗಳಿಗೆ ಹಾಜರಾಗುವ ಮೂಲಕ ಸದರಿ ಲೋಕ್ ಅದಾಲತ್ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಜಿ.ಕೆ.ಅವರು ಉಪಸ್ಥಿತರಿದ್ದರು.