ಹಾಸನ:ಕರ್ನಾಟಕ ರಾಜ್ಯ ಎಸ್ಸಿ- ಎಸ್ಪಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ ನ.29 ರಂದು ಬೆಳಗ್ಗೆ 10.30 ಕ್ಕೆ ಬೆಂಗಳೂರಿನ ಗಾಂಧಿಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಎಸ್ಸಿ ಎಸ್ಟಿ ಸಂಪಾದಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸ್ವಾಗತ್.ಎಂ.ಎಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ. ಸಮಾಜಕಲ್ಯಾಣ ಸಚಿವರಾದ ಡಾ.ಹೆಚ್.ಸಿ ಮಹಾದೇವಪ್ಪ ಅವರು ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಮಾಜಿ ಸಚಿವ ಹೆಚ್ ಆಂಜನೇಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಂ, ಹಿರಿಯ ಪತ್ರಕರ್ತ ಹೆಚ್.ಬಿ ಮದನ್ ಗೌಡ, ಬೆಂಗಳೂರು ಪ್ರೆಸ್ ಕ್ಲಬ್ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಆಗಮಿಸಲಿದ್ದಾರೆ.
ಸಂಘದ ಅಧ್ಯಕ್ಷರಾದ ಚೆಲುವರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಈ ಬಾರಿ ವಾರ್ಷಿಕದತ್ತಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರಾದ ಜಿ.ಎನ್ ಮೋಹನ್,ಬಿ.ಎಂ ಹನೀಫ್, ಮಾವಳ್ಳಿಶಂಕರ್, ಮಂಜುಳಾ ಹುಲಿ ಕುಂಟೆ ಅವರುಗಳಿಗೆ ನೀಡಲಾಗುವುದು. ಸಂಪಾದಕರಿಗೆ ಸಂಘದ ಗೌರವ ಪ್ರಶಸ್ತಿಯನ್ನು ದಾವಣಗೆರೆಯ ಹಿರಿಯ ಪತ್ರಕರ್ತರಾದ ಶಿವಮೊಗ್ಗ ಮಲ್ನಾಡ್ ವಾಣಿ ಪತ್ರಿಕೆ ಸಂಪಾದಕರಾದ ಕೆ.ಏಕಾಂತಪ್ಪ ತುಮಕೂರಿನ ವಿಶಾಲವಾರ್ತೆಯ ಸೊಗಡು ವೆಂಕಟೇಶ್, ಮಂಡ್ಯ ಜನೋದಯ ಪತ್ರಿಕೆಯ ಮಂಜುಳಾ ಕಿರುಗಾವಲು ಹಾಗೂ ಗುಲ್ಬರ್ಗಾ ಹೈದ್ರಾಬಾದ್ ಕರ್ನಾಟಕ ಮುಂಜಾವು ಪತ್ರಿಕೆಯ ಸುರೇಶ್ ಸಿಂಧೆ ಅವರುಗಳಿಗೆ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಸುಮಾರು 300 ಕ್ಕೂ ಹೆಚ್ಚು ಸಂಪಾದಕರು ಭಾಗವಹಿಸಲಿದ್ದು, ಹಾಸನ ಜಿಲ್ಲೆಯಿಂದ ಮತ್ತು ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಎಸ್ಸಿ ಎಸ್ಟಿ ಸಂಪಾದಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಸ್ವಾಗತ್.ಎಂ.ಎಸ್ ಕೋರಿದ್ದಾರೆ.