
ಹಾಸನ-ಸಿರಿ ಧಾನ್ಯಗಳ ಪ್ರಯೋಜನದ ಬಗ್ಗೆ ಈಗಾಗಲೇ ಸಾರ್ವಜನಿಕರಿಗೆ ಮನವರಿಕೆಯಾಗಿದ್ದು,ಸಿರಿ ಧಾನ್ಯಗಳನ್ನು ಹೆಚ್ಚು ಹೆಚ್ಚು ಬಳಸುವಂತೆ ಶಾಸಕರಾದ ಸ್ವರೂಪ್ ಪ್ರಕಾಶ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ‘ನಮ್ಮ ನಡೆ ಸಿರಿ ಧಾನ್ಯಗಳ ಕಡೆ’ಎಂಬ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿರಿ ಧಾನ್ಯಗಳ ಉತ್ಪಾದನೆ ಮತ್ತು ಬಳಕೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂದು ಜಿಲ್ಲಾ ಕ್ರೀಡಾಂಗಣದಿoದ ಹೇಮಾವತಿ ಪ್ರತಿಮೆ ಬಳಿವರೆಗೆ ಆಯೋಜಿಸಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಾಸನ ನಗರದಲ್ಲಿ ವಾರಕ್ಕೊಮ್ಮೆ ಸಾವಯವ ಉತ್ಪನ್ನಗಳ ಸಂತೆ ನಡೆಯುತ್ತಿದೆ ಇದು ದೊಡ್ಡ ಮಟ್ಟದಲ್ಲಿ ನಡೆಯುವಂತಾಗ ಬೇಕು ಎಂದು ತಿಳಿಸಿದರು.

ನಗರ ಸಭೆ ಅಧ್ಯಕ್ಷರಾದ ಚಂದ್ರೇಗೌಡ ಅವರು ಮಾತನಾಡಿ ಸಿರಿ ಧಾನ್ಯಗಳ ಮಹತ್ವ ಅರಿತುಕೊಂಡು ನಾಗರೀಕರು ಅವುಗಳ ಬಳಕೆಗೆ ಒತ್ತು ನೀಡಬೇಕು ಎಂದರು.
ಜಿಲ್ಲಾಧಿಕಾರಿ ಸತ್ಯಭಾಮ ಅವರು ಮಾತನಾಡಿ, ರೈತರು ಸಿರಿ ಧಾನ್ಯಗಳನ್ನು ಬೆಳೆಯಲು ಆಸಕ್ತಿವಹಿಸಬೇಕು ಎಂದ ಅವರು ಈಗಾಗಲೇ ಯುವ ಜನತೆಯಲ್ಲಿ ಸಿರಿ ಧಾನ್ಯಗಳ ಬಳಕೆಯ ಟ್ರೆಂಡ್ ಪ್ರಾರಂಭವಾಗಿದೆ ಅದೇ ರೀತಿ ನಾಗರೀಕರು ಸಿರಿ ಧಾನ್ಯಗಳ ಬಳಕೆಗೆ ಮುಂದಾಗಬೇಕು ಎಂದು ತಿಳಿಸಿದರು.

ಅಂತಾರರಾಷ್ಟ್ರೀಯ ವಾಣಿಜ್ಯ ಮೇಳ, ಸಿರಿ ಧಾನ್ಯಗಳು ಮತ್ತು ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸುವ ಮುಖ್ಯ ಉದ್ದೇಶಗಳೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.23 ರಿಂದ 25 ರವರೆಗೆ ಅಂತಾರರಾಷ್ಟ್ರೀಯ ಸಿರಿ ಧಾನ್ಯ ಮತ್ತು ಸಾವಯವ ಮೇಳವನ್ನು ಆಯೋಜಿಸಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಇಂದು ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಕಡಿಮೆ ನೀರಿನಲ್ಲಿ ಸಿರಿ ಧಾನ್ಯಗಳನ್ನು ಬೆಳೆಯಲು ಅವಕಾಶ ಇದೆ ಈ ನಿಟ್ಟಿನಲ್ಲಿ ರೈತಾಪಿ ವರ್ಗ ಈ ಕಿರು ಧಾನ್ಯಗಳ ಉತ್ಪಾದನೆಗೆ ಗಮನಹರಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ ಅವರು ಮಾತನಾಡಿ, ಸಿರಿ ಧಾನ್ಯಗಳ ಬಳಕೆಯಿಂದ ಉತ್ತಮ ಆರೋಗ್ಯ ಹೊಂದಬಹುದು ಹಾಗೂ ಮಧುಮೇಹ ನಿಯಂತ್ರಣಕ್ಕೆ ಕೂಡ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಎರಡು ತಲೆಮಾರಿನ ಹಿಂದೆ ಹಿರಿಯರು ಸಿರಿ ಧಾನ್ಯಗಳನ್ನು ಬಳಸುತ್ತಿದ್ದರು.ನಂತರ ಅವುಗಳ ಸ್ಥಾನದಲ್ಲಿ ಹೆಚ್ಚು ಅಕ್ಕಿ ಬಳಕೆ ಪ್ರಾರಂಭವಾಗಿ ಕಾಲಕ್ರಮೇಣ ಸಿರಿ ಧಾನ್ಯಗಳ ಬಳಕೆ ಕುಂಠಿತಗೊoಡಿದೆ ಎಂದರು.ಸ್ವತಃ ತಾವು ನಾಲ್ಕು ವರ್ಷಗಳಿಂದ ಸಿರಿ ಧಾನ್ಯಗಳನ್ನು ಬಳಸುತ್ತಿರುವುದಾಗಿ ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕರಾದ ರಮೇಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಲತಾ ಸರಸ್ವತಿ, ನಬಾರ್ಡ್ ಎ.ಜಿ.ಎಂ.ಮಾಲಿನಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಮಂಗಳ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಶಾಲಾ-ಕಾಲೇಜು ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಎತ್ತಿನ ಗಾಡಿಗಳು ಹಾಗೂ ಕಲಾ ತಂಡಗಳು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಮೆರುಗು ಮೂಡಿಸಿತ್ತು.
————ಅಭಿಷೇಕ್