ಹಾಸನ:ಪರಿಸರದಲ್ಲಿನ ಅಸಮತೋಲನದಿಂದ ಇಂದು ದೇಶದಲ್ಲಿ ಪ್ರಕೃತಿ ವಿಕೋಪಗಳು ಉಂಟಾಗಲು ಕಾರಣವಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಹೇಮಂತ್ ಹೇಳಿದರು.
ನಗರದ ವಿಜಯನಗರದಲ್ಲಿರುವ ಟೈಮ್ಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ಶನಿವಾರ ರೋಟರಿ ಕ್ಲಬ್ ಆಫ್ ಹಾಸನ ರಾಯಲ್, ಬಟ್ಟೆ ಅಂಗಡಿ, ಭೀಮ ಜ್ಯೂವೆಲ್ಲರ್ಸ್, ಜೀವ ರಕ್ಷಕ ರಕ್ತ ನಿಧಿ ಕೇಂದ್ರ ಹಾಗೂ ವಿನಯ್ ಮಕ್ಕಳ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ 2024ನೇ ಸಾಲಿನ ಹತ್ತು ಸಾವಿರ ಸಸಿ ವಿತರಣೆ ಮಾಡುವ ‘ಟೈಮ್ಸ್ ಹಸಿರ ಸಿರಿ’
ಸಸ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭೌಗೋಳಿಕವಾಗಿ ನಮ್ಮ ದೇಶದಲ್ಲಿ ಶೇ.31ರಷ್ಟು ಭೂ ಅರಣ್ಯ ಪ್ರದೇಶವಿರಬೇಕು, ಆದರೇ ನಮ್ಮಲ್ಲಿ ಶೇ.26ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಹಾಗಾಗಿ ನಮ್ಮಲ್ಲಿ ಪ್ರಕೃತಿ ವಿಕೋಪದಂತಹ ದುರ್ಘಟನೆಗಳು ನಡೆಯಲು ಕಾರಣವಾಗುತ್ತಿದೆ. ಸಸಿ ನೆಡುವುದು ಹಾಗೂ ಪೋಷಿಸುವುದು ಕೇವಲ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಕೆಲಸ ಎಂದು ಭಾವಿಸದೆ ಪ್ರತಿಯೊಬ ಜನಸಾಮಾನ್ಯರು ಪರಿಸರವನ್ನು ಉಳಿಸಿ ಬೆಳೆಸುವ ಕೆಲಸದಲ್ಲಿ ತೊಡಗಬೇಕು.
ಈಚೆಗೆ ಕೇರಳದಲ್ಲಿ ನಡೆದ ಪ್ರಕೃತಿ ವಿಕೋಪದ ಘಟನೆ ಎಲ್ಲರಿಗೂ ಪಾಠವಾಗಬೇಕು.ಈ ನಿಟ್ಟಿನಲ್ಲಿ ಟೈಮ್ಸ್,ಶಾಲೆಯಲ್ಲಿ ಹಮ್ಮಿಕೊಂಡಿರುವ ಇಂತಹ ಕಾರ್ಯಕ್ರಮಗಳು ಹೆಚ್ಚು ಪ್ರಯೋಜನಕಾರಿಯಾಗಲಿದೆ. ನಾವುಗಳು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸಸಿ ಬೆಳೆಸುವುದರ ಜೊತೆಗೆ ಪರಿಸರದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಡಬೇಕಾಗಿದೆ. ಸರ್ಕಾರದ ಹಂತದಲ್ಲಿ ಪರಿಸರದ ಉಳಿವಿಗಾಗಿ ಹಲವು ಕಠಿಣ ಕಾನೂನುಗಳು ಜಾರಿಗೆ ತರಲಾಗಿದೆ. ಅದಾಗ್ಯೂ ಕೆಲವರು ಅರಣ್ಯ ಒತ್ತುವರಿ, ನಾಶ ಹೀಗೆ ಕಾನೂನು ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಇವೆಲ್ಲವೂ ತಡೆಗಟ್ಟಬೇಕಾದರೆ ಮಕ್ಕಳಿಗೆ ಶಾಲಾ ಹಂತದಲ್ಲಿ ಪರಿಸರದ ಬಗೆಗೆ ಜ್ಞಾನ ನೀಡುವುದು ಪ್ರಯೋಜನಕಾರಿಯಾಗಿದೆ ಎಂದರು.
ಸಾಲು ಮರದ ತಿಮ್ಮಕ್ಕ ಪ್ರಶಸ್ತಿ ವಿಜೇತ ಹಾಗೂ ಪತ್ರಕರ್ತ ರವಿ ನಾಕಲಗೂಡು ಮಾತನಾಡಿ, ಪರಿಸರ ಇಂದು ನಮ್ಮ ವಿರುದ್ಧ ಮುನಿಸಿಕೊಳ್ಳಲು ನಾವುಗಳೇ ಕಾರಣ. ಏಕಂದರೆ ನಮ್ಮ ಅತೀಯಾದ ದುರಾಸೆಯಿಂದಾಗಿ ನಾವುಗಳು ಪರಿಸರವನ್ನು ನಾಶ ಮಾಡುತ್ತಿದ್ದೇವೆ.
ಪರಿಸರದ ಅಸಮತೋಲದಿಂದ ಇಂದು ಅರಣ್ಯದಲ್ಲಿ ಇರಬೇಕಾದ ಪ್ರಾಣಿಗಳು ನಾಡಿಗೆ ಬರುವಂತಾಗಿದೆ. ಶಾಲಾ ಹಂತದಲ್ಲಿ ಮಕ್ಕಳಿಗೆ ಸಸಿಗಳನ್ನು ನೆಡುವುದರಿಂದ ಆಗುವ ಪ್ರಯೋಜನಗಳನ್ನು ಬಗ್ಗೆ ಮನದಟ್ಟು ಮಾಡಿಕೊಡಬೇಕು.ಹಾಗೆಯೇ ಮಕ್ಕಳನ್ನು ಮಣ್ಣಿನೊಂದಿಗೆ ಬಾಂಧವ್ಯ ಇಟ್ಟಿಕೊಳ್ಳುವoತೆ ನೋಡಿಕೊಳ್ಳಬೇಕು.ಟೈಮ್ಸ್ ಗಂಗಾಧರ್,ಅವರು ಪ್ರತಿ ವರ್ಷ 10 ಸಾವಿರ ಸಸಿಗಳನ್ನು ತಮ್ಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ, ಮಕ್ಕಳು ಹಾಗೂ ಪೋಷಕರು ಅವರ ಕಾಳಜಿಯನ್ನು ಅರ್ಥ ಮಾಡಿಕೊಂಡು ಸಸಿ ಪಡೆದು ಅವುಗಳನ್ನು ಸಂರಕ್ಷಿಸಿ ಮಕ್ಕಳನ್ನು ಹೇಗೆ ಜೋಪಾನವಾಗಿ ಬೆಳೆಸುತ್ತಾರೊ ಹಾಗೆ ಸಸಿಗಳನ್ನು ಬೆಳೆಸಬೇಕಾಗಿದೆ. ಸರ್ಕಾರ ಹಾಗೂ ಅರಣ್ಯ ಇಲಾಖೆಯೊಂದಿಗೆ ನಾವೆಲ್ಲರೂ ಕೈ ಜೋಡಿಸುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್,ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಅಸ್ತಿ ಮಾಡಿಡುವುದರ ಜೊತೆ ಜೊತೆಗೆ ಭೂಮಿ ತಾಯಿ ಪೋಷಣೆಗಾಗಿ ಒಂದೆರೆಡು ಸಸಿಗಳನ್ನು ಹಾಕುವ ಮೂಲಕ ಮಕ್ಕಳಿಗೆ ಒಂದೊಳ್ಳೆಯ ಪರಿಸರವನ್ನು ನೀಡಬೇಕು. ಭೂಮಿ ಇದ್ದರೆ ನಾವು ಸೈಟು, ಮನೆ ಖರೀದಿ ಮಾಡಬಹುದು, ಭೂಮಿಯೇ ಇಲ್ಲವೆಂದರೆ ಯಾವುದನ್ನು ಸಂಪಾದಿಸಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ನಮ್ಮ ಟೈಮ್ಸ್ ಶಿಕ್ಷಣ ಸಂಸ್ಥೆ ವತಿಯಿ0ದ ಪ್ರತಿ ವರ್ಷ 10000 ಸಸಿಗಳನ್ನು ಮಕ್ಕಳಿಗೆ ವಿತರಣೆ ಮಾಡುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಇದಲ್ಲದೇ
ಕೆಲವು ಮುಖ್ಯ ರಸ್ತೆಗಳಲ್ಲಿ ಸಸಿ ನೆಟ್ಟು ಅವುಗಳನ್ನು ಪೋಷಿಸುವ ಕೆಲಸವನ್ನು ನಮ್ಮ ಸಂಸ್ಥೆ ಮಾಡಿಕೊಂಡು ಬರುತ್ತಿದೆ
ಎಂದರು.
ಸಭಾ ಕಾರ್ಯಕ್ರಮದ ನಂತರ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಹಾಸನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ,ನಾಯಕರಹಳ್ಳಿ ಮಂಜೇಗೌಡ, ಜೀವ ರಕ್ಷಕ ರಕ್ತ ನಿಧಿ
ಕೇಂದ್ರದ ಮೋಹನ್, ರೋಟರಿ ಕ್ಲಬ್ ಆಫ್ ಹಾಸನ ರಾಯಲ್‌ನ ಅಧ್ಯಕ್ಷ ಸಚ್ಚಿನ್, ಕಾರ್ಯದರ್ಶಿ ಪುನೀತ್, ಖಜಾಂಚಿ ರವಿ, ಸದಸ್ಯರಾದ ಯೋಗೇಶ್, ಗಿರೀಶ್, ಕಿರಣ್, ಯೋಗೇಶ್, ದಿಲೀಪ್ ಕುಮಾರ್ ಎಚ್.ಕೆ,ಬಟ್ಟೆ ಅಂಗಡಿ ಮುಖ್ಯಸ್ಥ ಭಾಸ್ಕರ್, ಟೈಮ್ಸ್ ಶಾಲೆಯ ಮುಖ್ಯ ಶಿಕ್ಷಕಿ ಬ್ಲೆಸ್ಸಿ ಶ್ಯಾಮ್, ಅರ್ಜುನ್, ಸುಮನ್ ಹಾಗೂ ಇತರರು ಹಾಜರಿದ್ದರು.
.