ಹಾಸನ: ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳೊಳಗಿನ ಪ್ರಶ್ನಾರ್ಥಕ ಮನೋಭಾವವನ್ನು ಮಗು ತನ್ನ ಕುತೂಹಲಕ್ಕನುಗುಣವಾಗಿ ಪ್ರಶ್ನೆಗಳನ್ನ ಕೇಳಿದಾಗ ಗದರಿಸಿ ಅವರ ಉತ್ಸಾಹವನ್ನು ಮೊಟುಕುಗೊಳಿಸಬಾರದು ಎಂದು ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿ ಡಾ. ರವಿ ಕುಮಾರ್ ಹೇಳಿದರು.
ನಗರದ ವಿಜಯನಗರ ಬಡಾವಣೆಯಲ್ಲಿರುವ ಟೈಮ್ಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ಈಚೆಗೆ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಸಕ್ತಿಗೆ ಅನುಗುಣವಾಗಿ ಕ್ರಿಯಾಶೀಲರನ್ನಾಗಿಸಲು ಮತ್ತಷ್ಟು ಹುರಿದುಂಬಿಸಿ ಹಾಗೂ ಉತ್ತಮ ಸಂಸ್ಕಾರದೊಂದಿಗೆ ಕಥೆಗಳು ಕ್ರೀಡೆಗಳೊಂದಿಗೆ ಸದೃಢರನ್ನಾಗಿ ಮಾಡಬೇಕು. ಮಕ್ಕಳು ಚಿಕ್ಕ ಹಂತದಿಂದಲೇ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿ ಬೆಳೆಯು ಹಾಗೆ ನೋಡಿಕೊಳ್ಳಬೇಕು.
ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಹೀಗೆ ಒಂದಿಲ್ಲೊಂದು ಕ್ಷೇತ್ರದಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಮಾಡಬೇಕು. ಇಂದು ಸಾಧನೆ ಮಾಡಲು ನಾನಾ ಕ್ಷೇತ್ರಗಳು ಇದ್ದು, ಪೋಷಕರು ಮಕ್ಕಳನ್ನು ನಿರ್ದಿಷ್ಟವಾಗಿ ಇದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಮಕ್ಕಳನ್ನು ಕಟ್ಟಿ ಹಾಕಬಾರದು. ಮಕ್ಕಳನ್ನು ಒತ್ತಡದಲ್ಲಿ ಬೆಳೆಸುವುದನ್ನು ನಿಲ್ಲಿಸಿ ಅವರನ್ನು ಹಂತ ಹಂತವಾಗಿ ಸಾಧನೆ ಮಾಡುವತ್ತ ನೀತಿ ಬೋಧನೆ ಮಾಡಬೇಕು ಎಂದರು.

ಟೈಮ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಬಿ.ಕೆ. ಟೈಮ್ಸ್ ಗಂಗಾಧರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಬೇಕಾದ ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣವನ್ನು ನೀಡುವಲ್ಲಿ ಟೈಮ್ಸ್ ಶ್ರಮಿಸುತ್ತಿದೆ. ನಮ್ಮ ಪ್ರತಿಷ್ಠೆ ಅಂತಸ್ತನ್ನು ಬದಿಗಿಟ್ಟು ಪುಟ್ಟ ಮಕ್ಕಳನ್ನು ಅಜ್ಜ ಅಜ್ಜಿಯರ ಬಾಂಧವ್ಯದ ಮಡಿಲಲ್ಲಿ ಬೆಳೆಯಲು ಬಿಡಿ ಅವರ ಅನುಭವದ ಒಡನಾಟ ಮಕ್ಕಳಲ್ಲಿ ಸಹಜೀವನವನ್ನು ಕಲಿಸಿಕೊಡುತ್ತದೆ ಮಕ್ಕಳು ಚಿಕ್ಕವರಿರುವಾಗ ಹಳ್ಳಿಗಳಲ್ಲಿ ಬೆಳೆಯಲು ಅವಕಾಶ ಕಲ್ಪಿಸಿ ಪರಿಸರದೊಂದಿಗೆ ಬೆರೆತು ಮಕ್ಕಳು ಆಡಿ ಬೆಳೆದರೆ ಇನ್ನಷ್ಟು ಸದೃಢರಾಗುತ್ತಾರೆ. ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ವೈದ್ಯರು ಎಂಜಿನಿಯರ್‌ಗಳೇ ಆಗಬೇಕೆಂಬ ಆಸೆಯಿಂದ ಅವರ ಮೇಲೆ ಒತ್ತಡವನ್ನು ಹೇರದೆ ಮಗುವಿನ ಸಹಜ ಕಲಿಕೆಗೆ ಪ್ರೋತ್ಸಾಹಿಸಿ ಎಲ್ಲಾ ವೃತ್ತಿಗಳಲ್ಲಿ ಇರುವ ಗೌರವ ಭಾವವನ್ನು ಮೂಡಿಸಿ ಹಾಗೂ ಮೊಬೈಲ್‌ಗಳಿಂದ ಮಕ್ಕಳನ್ನು ದೂರವಿಡಿ ಎಂದು ಹೇಳಿದರು.
ಶಾಲಾ ಪ್ರಾಂಶುಪಾಲರಾದ ಬ್ಲೆಸ್ಸಿ ಶ್ಯಾಮ್ ಹಾಗೂ ಶಿಕ್ಷಕರು ಹಾಜರಿದ್ದರು.