ಎಚ್.ಡಿ.ಕೋಟೆ: ಗ್ರಾಮೀಣ ಪ್ರದೇಶದ ಯುವಕರಿಗೆ ನೂತನ ಕೌಶಲ್ಯವನ್ನು ಕಲ್ಪಿಸಿ ಸ್ವಾವಲಂಭಿಯಾಗಿ ಉದ್ಯೋಗವಕಾಶವನ್ನು ಕಲ್ಪಿಸುವುದರ ಜೊತೆಗೆ ಉದ್ಯಮಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯು ಕಾರ್ಯವನ್ನು ನಿರ್ವಹಿಸುತ್ತಿದ್ದು ತರಬೇತಿಯನ್ನು ಪಡೆದ ಪ್ರತಿಯೊಬ್ಬರು ಕೂಡ ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮವಾದ ಜೀವನವನ್ನು ಕಟ್ಟಿಕೊಳ್ಳುವಂತೆ ಯುವಕರಿಗೆ ಹೆಚ್.ಡಿ.ಕೋಟೆ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಉಪನ್ಯಾಸಕ ನಾಗರಾಜು ತಿಳಿಸಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಅಂಗಸಂಸ್ಥೆ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಕೆಂಚನಹಳ್ಳಿ ಹಾಗೂ ಟೈಟನ್ ಸಂಸ್ಥೆ ವತಿಯಿಂದ ಮೊಬೈಲ್ ರಿಪೇರಿ ತರಬೇತಿಯನ್ನು ಪಡೆದ 22 ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ಕೆಂಚನಹಳ್ಳಿಯ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಏರ್ಪಡಿಸಲಾಗಿದ್ದ, ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಾನವ ಸಂಪನ್ಮೂಲ ವಿಭಾಗ ಸಂಯೋಜಕರಾದ ತನುಜಾ ಮಾತನಾಡಿ, ಮನುಷ್ಯನ ಜೀವನದಲ್ಲಿ ಕೌಸಲ್ಯದಿಂದ ಕೂಡಿರುವ ತರಬೇತಿಗಳು ಯುವ ಜನರನ್ನು ಆರ್ಥಿಕವಾಗಿ ಬದಲಾವಣೆಯನ್ನು ಮಾಡುವುದರ ಜೊತೆಗೆ ಬಲಿಷ್ಠರನ್ನಾಗಿ ಮಾಡಿ ದೇಶದ ಅಭಿವೃದ್ಧಿಯನ್ನು ಬಲಪಡಿಸುತ್ತದೆ ಎಂದು ತಿಳಿಸಿದರು.

ವಿವೇಕಾ ಗ್ರಾಮೀಣ ಜಿವನಾಧಾರ ಕೇಂದ್ರದ ವ್ಯವಸ್ಥಾಪಕ ಪಿ.ಜಿ.ರವಿಕುಮಾರ್ ಮಾತನಾಡಿ, ಸಂಸ್ಥೆಯು ಗ್ರಾಮೀಣ ಯುವಕ ಮತ್ತು ಯುವತಿಯರಿಗೆ ಹಲವಾರು ರೀತಿಯ ವೃತ್ತಿಪರ ತರಬೇತಿಗಳನ್ನು ನೀಡುತ್ತಿದ್ದು, ಈ ರೀತಿಯ ತರಬೇತಿಗಳನ್ನು ಪಡೆದುಕೊಂಡು ಪ್ರತಿಯೊಬ್ಬರು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವೇಕ ಜೀವನಾಧಾರ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು.
- ಶಿವಕುಮಾರ, ಕೋಟೆ