ಎಚ್.ಡಿ.ಕೋಟೆ: ಪ್ರಿಯಕರನ ಜೊತೆ ಮನೆ ಬಿಟ್ಟು ಪರಾರಿಯಾದ ಯುವತಿಯ ಕುಟುಂಬಸ್ಥರು ಮನನೊಂದು ಕೆರೆಗೆ ಹಾರಿ ಪ್ರಾಣಬಿಟ್ಟಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಡ್ರೈವರ್ ಕಾಲೋನಿಯ ನಿವಾಸಿ ಮಹದೇವಸ್ವಾಮಿ(55), ಪತ್ನಿ ಮಂಜುಳಾ(42), ಕಿರಯ ಪುತ್ರಿ ಹರ್ಷಿತಾ(18) ಸಮೀಪದ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬದ ಮೂವರು ಸಾಮೂಹಿಕವಾಗಿ ಕೈ, ಕಾಲುಗಳಿಗೆ ಅಗ್ಗ ಕಟ್ಟಿಕೊಂಡು ಕೆರೆಯಲ್ಲಿ ಮುಳುಗಿದ್ದಾರೆ. ಕೆರೆ ಏರಿ ಮೇಲೆ ಕೆಲವು ಗಂಟೆಗಳಿಂದ ಬೈಕ್ ನಿಂತಿದ್ದನ್ನು ಗಮನಿಸಿದ ದಾರಿ ಹೋಕರು ಅನುಮಾನಗೊಂಡು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಈ ವೇಳೆ ಚಪ್ಪಲಿಗಳು ಬಿದ್ದಿರುವುದನ್ನು ಗಮನಿಸಿ ಸಮೀಪ ಬಂದು ನೋಡಿದಾಗ ಮೃತ ದೇಹಗಳ ಕುರುಹು ಕಂಡು ಪಟ್ಟಣದ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಹೊರತೆಗಿದ್ದಾರೆ.

ಡ್ರೈವರ್ ಕಾಲೊನಿಯ ನಿವಾಸಿ ಅರ್ಪಿತಾ ಹಲವು ವರ್ಷಗಳಿಂದ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಳು. ಮದುವೆಗೆ ಯುವತಿಯ ಕುಟುಂಬದವರು ನಿರಾಕರಿಸಿದರು ಎಂಬ ಕಾರಣಕ್ಕೆ ಮನೆಯಿಂದ ಕೆಲದಿನಗಳಿಂದ ಹೊರಟು ಹೋಗಿದ್ದಳು ಎನ್ನಲಾಗುತ್ತಿದೆ.

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ:-
ತಮ್ಮನ ಹೆಂಡತಿ ಸಹ ಕೆಲ ವರ್ಷಗಳ ಹಿಂದೆ ಬೇರೊಬ್ಬನ ಜೊತೆ ಹೋಡಿಹೋಗಿದ್ದು, ಆಗಲೂ ಸಹ ತೀವ್ರವಾಗಿ ಮನನೊಂದಿದ್ದೆವು, ಈಗ ನಮ್ಮ ಹಿರಿಯ ಮಗಳು ಪ್ರೇಮ ಪಾಶಕ್ಕೆ ಬಿದ್ದು ಯುವಕನೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ನಾವು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದೇವೆ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ತಾಲೂಕಿನ ಅಗ್ನಿಶಾಮಕ ವಾಹನ ದುರಸ್ಥಿಯಾಗಿದ್ದು, ಹುಣಸೂರಿನ ವಾಹನವನ್ನು ತರಿಸಿದ್ದರಿಂದ ಸಿಬ್ಬಂದಿ ಸ್ಥಳಕ್ಕೆ ಬರುವುದು ತಡವಾಯಿತು.ಇದರಿಂದ ಸಾಗರೋಪಾದಿಯಲ್ಲಿ ನೆರೆದಿದ್ದ ಸಾರ್ವಜನಿಕರು ಓಡಿ ಹೋದ ಮಗಳಿಗೆ ಹಿಡಿ ಶಾಪ ಹಾಕುತ್ತಿದ್ದರು.

ಪ್ರೀತಿಗೂ ಮೊದಲು ಜೀವನ ಮುಖ್ಯ: ತಿಳಿ ಹೇಳಿದ್ದ ಕುಟುಂಬಸ್ಥರು
ಬೂದನೂರು ಗ್ರಾಮದ ಮಹದೇವಸ್ವಾಮಿ ಹಲವು ವರ್ಷಗಳಿಂದ ಪಟ್ಟಣದ ಡ್ರೈವರ್ ಕಾಲೊನಿಯಲ್ಲಿ ವಾಸವಿದ್ದರು. ಇವರ ಹಿರಿಯ ಪುತ್ರಿ ಅರ್ಪಿತಾ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು, ನಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗುವುದಾಗಿ ಹಠ ಹಿಡಿದಿದ್ದಳು ಎನ್ನಲಾಗಿದೆ. ಇದಕ್ಕೆ ಕುಟುಂಬಸ್ಥರು ನಾವು ಕಡು ಬಡತನದಲ್ಲಿ ಕೂಲಿ ಮಾಡಿ ನಿನ್ನನ್ನು ಸಾಕಿದ್ದೇವೆ. ಪ್ರೀತಿಗೂ ಮೊದಲು ಜೀವನ ಮುಖ್ಯ. ನೀನು ಚೆನ್ನಾಗಿ ಓದಿ ಸರ್ಕಾರಿ ಉದ್ಯೋಗ ಪಡೆದು ನಂತರ ಮದುವೆಯ ಬಗ್ಗೆ ಯೋಚಿಸು ಎಂದು ಕೆಲ ದಿನಗಳ ಹಿಂದೆ ತಿಳಿ ಹೇಳಿದ್ದರು ಎನ್ನಲಾಗಿದೆ. ಆದರೆ ಯುವತಿ ಪೋಷಕರ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಮದುವೆಗೆ ನಿರಾಕರಿಸುತ್ತಾರೆ ಎಂದು ಭಾವಿಸಿ ಮೂರು ದಿನಗಳ ಹಿಂದೆ ಪ್ರಿಯಕರನ ಜೊತೆ ಮನೆ ಬಿಟ್ಟು ಪರಾರಿಯಾಗಿದ್ದಾಳೆ. ಓದುವ ವಯಸ್ಸಿನಲ್ಲಿ ಪ್ರೀತಿಗೆ ಸಿಲುಕಿ ಕುಟುಂಬಸ್ಥರ ಮಾತನ್ನು ಕೇಳದೆ ಅವರ ಸಾವಿಗೆ ಕಾರಣಳಾದ ಯುವತಿಗೆ ನೆರೆದಿದ್ದ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದರು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಸ್ಥಳದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ್ ಹಾಗೂ ಸಬ್ ಇನ್ಸ್ಪೆಕ್ಟರ್ ಚಿಕ್ಕನಾಯಕ ಸಿಬ್ಬಂದಿಗಳು ಇದ್ದರು.
– ಶಿವಕುಮಾರ