ಮೈಸೂರು-ಸೆಸ್ಕ್ ನಿಗಮ ಕಚೇರಿ ಸಿಬ್ಬಂದಿ, ಹೊರ ಗುತ್ತಿಗೆ ನೌಕರರಿಗೆ ಆರೋಗ್ಯ ತಪಾಸಣೆ-ನಿಗಮ ಕಚೇರಿಯಲ್ಲಿ ಎರಡು ದಿನಗಳ ಶಿಬಿರಕ್ಕೆ ರಮೇಶ್ ಬಂಡಿಸಿದ್ದೇಗೌಡ ಚಾಲನೆ

ಮೈಸೂರು, ಮೇ 19, 2025: ಸಿಬ್ಬಂದಿಯ ಸುರಕ್ಷತೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌), ನಿಗಮದ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎರಡು ದಿನಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು, ಶಾಸಕರೂ ಆಗಿರುವ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಅವರು ಸೋಮವಾರ ಇದಕ್ಕೆ ಚಾಲನೆ ನೀಡಿದರು.

ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್‌ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದ ರಮೇಶ್ ಬಂಡಿಸಿದ್ದೇಗೌಡ ಅವರು, ಜನರಿಗೆ ವಿದ್ಯುತ್ ಪೂರೈಸುವ ಸೆಸ್ಕ್ ಸಿಬ್ಬಂದಿ ತಮ್ಮ ಆರೋಗ್ಯ ಮತ್ತು ಸುರಕ್ಷತೆ ಬಗ್ಗೆಯೂ ಗಮನ ಹರಿಸುವ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ನಿಗಮ ಕೈಗೊಂಡಿರುವ ಈ ಶಿಬಿರವು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

ಮೊದಲ ದಿನದಂದು ನಡೆದ ಶಿಬಿರದಲ್ಲಿ ಸೆಸ್ಕ್‌ ಪ್ರಧಾನ ಕಚೇರಿಯಲ್ಲಿ ಗುತ್ತಿಗೆ ಹಾಗೂ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಡೇಟಾ ಎಂಟ್ರಿ ಸಿಬ್ಬಂದಿ, ವಾಹನ ಚಾಲಕರುಗಳು, ನಿಗಮ ಕಚೇರಿಯ ಸಹಾಯಕ ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ಆರೋಗ್ಯದ ತಪಾಸಣೆ ಮಾಡಿಕೊಳ್ಳುವ ಮೂಲಕ ಶಿಬಿರದ ಲಾಭ ಪಡೆದರು. ಶಿಬಿರದ ಎರಡನೇ ದಿನವಾದ ಮಂಗಳವಾರ(ಮೇ 20) ಪ್ರಧಾನ ಕಚೇರಿಯಲ್ಲಿ ಕರ್ತವ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿಗೆ ಆರೋಗ್ಯ ತಪಾಸಣೆ ನಡೆಸಲಾಗುವುದು.

80 ಪರೀಕ್ಷೆಗಳ ಲಾಭ:
ನಿಗಮದ ಪ್ರಧಾನ ಕಚೇರಿಯಲ್ಲಿ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 80ಕ್ಕೂ ಹೆಚ್ಚು ತಪಾಸಣೆ ನಡೆಸಲಾಯಿತು. ಪ್ರಮುಖವಾಗಿ ರಕ್ತ ಪರೀಕ್ಷೆ, ಥೈರಾಯ್ಡ್‌ ಪರೀಕ್ಷೆ, ಮೂತ್ರ ಪರೀಕ್ಷೆ, ಎಫ್‌ಬಿಎಸ್‌, ಎಲ್‌ಎಫ್‌ಟಿ, ಕ್ಯಾಲ್ಶಿಯಂ, ವಿಟಮಿನ್‌ ಬಿ12 ಮತ್ತು ಡಿ ಪರೀಕ್ಷೆ ಸೇರಿದಂತೆ ಇನ್ನಿತರ ತಪಾಸಣೆ ನಡೆಸಲಾಯಿತು. ಅಂದಾಜು 7000 ರೂ. ವೆಚ್ಚವಾಗುವ ಈ ಎಲ್ಲ ತಪಾಸಣೆಗಳನ್ನು ಸಂಪೂರ್ಣ ಉಚಿತವಾಗಿ ಕಲ್ಪಿಸುವ ಮೂಲಕ ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳ ಆರೋಗ್ಯ ಸುರಕ್ಷತೆಗೆ ಸೆಸ್ಕ್‌ ಆದ್ಯತೆ ನೀಡಿದೆ.

ಇದೇ ಸಂದರ್ಭದಲ್ಲಿ ನಿಗಮ ಕಚೇರಿಯಲ್ಲಿ ಹೊಸದಾಗಿ ನಿರ್ಮಿಸಿರುವ ಲಿಫ್ಟ್ ಅನ್ನು ರಮೇಶ್ ಬಂಡಿಸಿದ್ದೇಗೌಡ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸೆಸ್ಕ್ ಮುಖ್ಯ ಆರ್ಥಿಕ ಅಧಿಕಾರಿ ರೇಣುಕಾ, ಪ್ರಧಾನ ವ್ಯವಸ್ಥಾಪಕರುಗಳಾದ ಡಾ. ಬಿ.ಆರ್. ರೂಪ, ಲೋಕೇಶ್ ಸೇರಿದಂತೆ ಇನ್ನಿತರರು ಇದ್ದರು.


ತನ್ನ ಸಿಬ್ಬಂದಿ ಹಾಗೂ ಅಧಿಕಾರಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಮೊದಲಿನಿಂದಲೂ ಸೆಸ್ಕ್ ಆದ್ಯತೆ ನೀಡಿದೆ. ಅದರಂತೆ ನಿಗಮ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿ, ಅಧಿಕಾರಿಗಳ ಅನುಕೂಲಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ. ಶಿಬಿರದಲ್ಲಿ ಅಂದಾಜು 7000 ರೂ. ವೆಚ್ಚವಾಗುವ ಹಲವು ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತಿದೆ. ಎಲ್ಲ ಸಿಬ್ಬಂದಿ ಇದರ ಪ್ರಯೋಜನ ಪಡೆದು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು”.

  • ಕೆ.ಎಂ. ಮುನಿಗೋಪಾಲ್‌ ರಾಜು,
    ವ್ಯವಸ್ಥಾಪಕ ನಿರ್ದೇಶಕರು, ಸೆಸ್ಕ್‌.

Leave a Reply

Your email address will not be published. Required fields are marked *