ಹೊಳೆನರಸೀಪುರ:ಅನುದಾನ ನೀಡದ ರಾಜ್ಯಸರಕಾರ-ವಸತಿ ರಹಿತರಿಗೆ ಶೀಘ್ರದಲ್ಲೇ ಸಿಗಲಿವೆ ಸೈಟುಗಳು ಹೆಚ್.ಡಿ ರೇವಣ್ಣ ಭರವಸೆ

ಹೊಳೆನರಸೀಪುರ:ಕಾಂಗ್ರೆಸ್ ಸರಕಾರ ರಾಜ್ಯದ ಅಭಿವೃದ್ಧಿ ಕೆಲಸವನ್ನು ಸಂಪೂರ್ಣ ಕಡೆಗಣಿಸಿದೆ.ಅದರಲ್ಲೂ ಬೇರೆ ಪಕ್ಷದ ಆಡಳಿತ ಇರುವ ತಾಲ್ಲೂಕುಗಳಿಗೆ ಹಣವನ್ನೇ ಕೊಡುತ್ತಿಲ್ಲ.ನಮ್ಮ ಪುರಸಭೆಗೆ ಕಳೆದ ವರ್ಷ12.05 ಲಕ್ಷ ರೂಗಳನ್ನು ಮಾತ್ರ ನೀಡಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ದೂರಿದರು.

ಸೋಮವಾರ ನಡೆದ ಪುರಸಭೆ ಮಾಸಿಕ ಸಭೆಯಲ್ಲಿ ಮಾತನಾಡಿ ನಮ್ಮ ಊರಿಗೆ 54 ವರ್ಷಗಳ ಹಿಂದೆ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಅದೆಲ್ಲಾ ಸಂಪೂರ್ಣ ಹಾಳಾಗಿ ಹೊಸದಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ 90 ಕೋಟಿ ಹಣವನ್ನು ಬಿಡುಗಡೆ ಮಾಡಿಸಿದ್ದೆ.

ಅದು ಹಣಕಾಸು ಇಲಾಖೆಯ ಅನುಮೋದನೆಗೆ ಹೋಗಿದ್ದು ಕಾಂಗ್ರೆಸ್ ಸರಕಾರ ಆ ಹಣ ಬಿಡುಗಡೆಯನ್ನು ತಡೆಹಿಡಿದಿದ್ದು ಅಲ್ಲಿಂದ ಅನುಮೋದನೆ ಆಗಿ ಬಂದಿಲ್ಲ. ಅವರು ಕೊಡದಿದ್ದರೆ ನಾನು ಬಿಡುವುದಿಲ್ಲ ಹೋರಾಟ ಮಾಡಿಯಾದರೂ ಈ ಹಣ ತರುತ್ತೇನೆ. 7.5 ಕೋಟಿ ವೆಚ್ಚದಲ್ಲಿ ಹಳೇಕೋಟೆ ಸಮೀಪ ಫ್ಲೈ ಓವರ್ ನಿರ್ಮಾಣ ಆಗುತ್ತದೆ. ಎಳ್ಳೇಶಪುರದಿಂದ ಪೆದ್ದನಹಳ್ಳಿ ವರೆಗೆ 530 ಕೋಟಿ ವೆಚ್ಚದಲ್ಲಿ 9 ಕಿ.ಮೀ ರಿಂಗ್ ರೋಡ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ.

ಇಲ್ಲಿನ ಚೆನ್ನಾಂಬಿಕ ವೃತ್ತದಿಂದ ಕನಕಭವನದ ವರೆಗೆ 25 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ವಸತಿ ರಹಿತರಿಂದ 3700 ನಿವೇಶನಗಳಿಗೆ ಅರ್ಜಿ ನೀಡಿದ್ದು ರೈಲ್ವೆಟ್ರಾಕ್ ಪಕ್ಕ ಮಲ್ಲಪ್ಪನಹಳ್ಳಿ ರಸ್ತೆಯಲ್ಲಿ ಇದಕ್ಕೆ ತಕ್ಕ ನಿವೇಶನವನ್ನು ಮಾಲೀಕರ ಒಪ್ಪಿಗೆ ಪಡೆದು ವಶಪಡಿಸಿಕೊಳ್ಳಲು ನಿರ್ಣಯಿಸಲಾಗಿದೆ ಎಂದರು.

ಈ ಸಭೆಯಲ್ಲಿ ವಿವಿಧ ಬಡಾವಣೆಗಳಲ್ಲಿ ಚರಂಡಿ ನಿರ್ಮಾಣ,ರಸ್ತೆ ಅಭಿವೃದ್ದಿ, ಸಿ.ಸಿ. ಕ್ಯಾಮರಾ ಅಳವಡಿಕೆ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಹಾಗೂ ಇನ್ನಿತರ ಟೆಂಡರ್ ಗಳನ್ನು ನೀಡಲು ಯಾವುದೇ ವಿರೋಧ ಚರ್ಚೆ ಇಲ್ಲದೆ ಅನುಮೋದನೆ ಆಯಿತು.

ಬಹುತೇಕ ಕಾಮಗಾರಿಗಳನ್ನು ಟೆಂಡರ್ ಮೂಲಕ ನಿಗಧಿತ ಗುದ್ದಿಗೆದಾರರೇ ಪಡೆದುಕೊಂಡಿದ್ದಾರೆ.

ಬೆಳಿಗ್ಗೆ 10.15 ಕ್ಕೆ ಕರೆದಿದ್ದ ಮಾಸಿಕ ಸಭೆಗೆ ಶಾಸಕ ಎಚ್.ಡಿ. ರೇವಣ್ಣ ನಿಗಧಿತ ಸಮಯಕ್ಕೆ ಸರಿಯಾಗಿ ಆಗಮಿಸಿ ಸಭೆಯನ್ನು ಬೇಗ ಮುಗಿಸಿದರು. ಪುರಸಭೆಯಲ್ಲಿ 23 ಸದಸ್ಯರಿದ್ದು ಉಪಾಧ್ಯಕ್ಷೆ ಸೇರಿದಂತೆ 10 ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು. ಕೆ. ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್ ಉಪಸ್ಥಿತರಿದ್ದರು. ರಮೇಶ್ ಸಭೆಯ ನಡವಳಿಕೆಗಳನ್ನು ಓದಿದರು.

—————ವಸಂತ್ ಕುಮಾರ್

Leave a Reply

Your email address will not be published. Required fields are marked *

× How can I help you?