ಹೊಳೆನರಸೀಪುರ:ವಾಲ್ಮೀಕಿ ಅವರ ರಾಮಾಯಣ ಭಾರತಕ್ಕಷ್ಟೇ ಅಲ್ಲ,ಇಡೀ ವಿಶ್ವಕ್ಕೆ ಮಾರ್ಗದರ್ಶಕ ಗ್ರಂಥ ಎನಿಸಿದೆ. ಇಂತಹ ಮಹಾನ್ ವ್ಯಕ್ತಿಯ ಜನ್ಮದಿನವನ್ನು ಆಚರಿಸುವ ನಾವು, ಅವರು ತೋರಿದ ಮಾರ್ಗದಲ್ಲಿ ನಡೆದು, ಇತರರಿಗೂ ಒಳ್ಳೆಯ ಮಾರ್ಗದರ್ಶನ ಮಾಡಿದರೆ ಅದು ವಾಲ್ಮೀಕಿ ಅವರಿಗೆ ಗೌರವ ಸಲ್ಲಿಸಿದಂತೆ ಎಂದು ಶಾಸಕ ಎಚ್.ಡಿ. ರೇವಣ್ಣ ಅಭಿಪ್ರಾಯಪಟ್ಟರು.
ತಾಲೂಕು ಆಡಳಿತ ಗುರುವಾರ ಆಯೋಜಿಸಿದ್ದ ವಾಲ್ಮೀಕಿಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ನಾಡಿಗೆ ಮಾರ್ಗದರ್ಶನ ನೀಡಿದ ವಾಲ್ಮೀಕಿ, ಕನಕದಾಸರು, ಬಸವಣ್ಣ, ಕೆಂಪೇಗೌಡ ಅವರನ್ನು, ಅವರವರ ಜಾತಿಗೆ ಸೀಮಿತ ಮಾಡಿಕೊಂಡಿದ್ದಾರೆ. ಇವರುಗಳು ಯಾವುದೇ ಒಂದು ಜಾತಿ, ಜನಾಂಗಕ್ಕೆ ಸೀಮತರಾದವರಲ್ಲ. ಅವರ ಮಾರ್ಗದರ್ಶನ ನಮಗೆಲ್ಲರಿಗೂ ಸದಾಕಾಲ ಅವಶ್ಯಕ ಎಂದರು.
ದೇವೇಗೌಡರು ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಆಗಿದ್ದಾಗ ಜಾರಿಗೆ ತಂದ ಮೀಸಲಾತಿ ನೀತಿಯಿಂದ ಹಿಂದುಳಿದ ಜನಾಂಗಗಳ ಜನರೂ ಒಳ್ಳೆ ಒಳ್ಳೆಯ ಅಧಿಕಾರ ಹಿಡಿಯಲು ಸಹಕಾರ ಆಯಿತು. ನಮ್ಮ ಪುರಸಭೆಗೆ ನಾಯಕ ಜನಾಂಗದ ಮಹಿಳೆಯೊಬ್ಬರು ಅಧ್ಯಕ್ಷರಾಗಿದ್ದರು ಎಂದು ತಿಳಿಸಿದರು.
ಮುಖ್ಯಭಾಷಣ ಮಾಡಿದ ನಿವೃತ್ತ ಉಪನ್ಯಾಸಕ ಪ್ರಭುಶಂಕರ್, ಆದಿಕವಿ ವಾಲ್ಮೀಕಿ ಮೊದಲು ರಾಮಾಯಣ ಬರೆದವರು. ನಂತರ ಅನೇಕರು ರಾಮಾಯಣ ಬರೆದರು. ವಾಲ್ಮೀಕಿ ಅವರು ಬರೆದ ರಾಮಾಯಣದ ಲಕ್ಷ ಲಕ್ಷ ಪುಸ್ತಕಗಳು ಮುದ್ರಣ ಗೊಂಡಿದೆ. 14 ಸಾವಿರ ಶ್ಲೋಕಗಳು, 18 ಸಾವಿರ ಪದಗಳ ವಾಲ್ಮೀಕಿ ರಾಮಾಯಣವನ್ನು ಪ್ರಪಂಚದ ಅನೇಕ ದೇಶಗಳ ಜನರು ವಿವಿಧ ಬಗೆಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ಭಾರತದಲ್ಲಿ ರಾಮನನ್ನು ಆರಾಧಿಸಿದರೆ, ಶ್ರೀಲಂಕಾದಲ್ಲಿ ರಾವಣನನ್ನು , ಮಲೇಶಿಯಾದಲ್ಲಿ ಹನುಮಂತನನ್ನು ಆರಾಧಿಸುತ್ತಾರೆ.
ಥೈಲ್ಯಾಂಡಿನಲ್ಲಿ ರಾಮಾಯಣ ಗ್ರಂಥದ ಮೇಲೆ ಪ್ರಮಾಣ ಮಾಡಿಸುತ್ತಾರೆ. ಓಟ್ಟಾರೆ ಪ್ರಪಂಚದ ಜನರು ವಾಲ್ಮೀಕಿ ರಾಮಾಯಣ ಅತ್ಯಂತ ಒಳ್ಳೆಯ ಮಾರ್ಗದರ್ಶಕ ಗ್ರಂಥ ಎಂದು ಸ್ವೀಕರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಕೆ.ಶ್ರೀಧರ್, ಉಪಾಧ್ಯಕ್ಷೆ ಸಾವಿತ್ರಮ್ಮ, ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್, ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ , ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ. ಸುರೇಶ್ ಕುಮಾರ್ , ಕೃಷಿ ಅಧಿಕಾರಿ ಸಪ್ನಾ, ಸರಕಾರಿ ಆಸ್ಪತ್ರೆಯ ಅಧಿಕಾರಿ ಚಿನ್ನಮ್ಮ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೌಸರ್ ಅಹಮದ್, ವಾಲ್ಮೀಕಿ ಸಂಘದ ತಾಲ್ಲೂಕು ಅಧ್ಯಕ್ಷ ಜವರಪ್ಪ ನಾಯಕ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಬಿ ಪುಟ್ಟೇಗೌಡ. ಪುರಸಭಾ ಸದಸ್ಯರಾದ ಶಿವಣ್ಣ, ಎ. ಜಗನ್ನಾಥ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಸಿ.ಆರ್. ಮಂಜುನಾಥ್, ಲಕ್ಷ್ಮಣ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ನಾಯಕ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ವಾಲ್ಮೀಕಿ ಅವರ ಭಾವಚಿತ್ರವನ್ನು ಕಲಾತಂಡಗಳ ಜೊತೆಯಲ್ಲಿ ಅಲಂಕೃತ ವಾಹನದಲ್ಲಿ ನಡೆಸಿದ ಮೆರವಣಿಗೆಗೆ ಸಂಸದ ಶ್ರೇಯಶ್ ಪಟೇಲ್ ಚಾಲನೆ ನೀಡಿದರು.
ಕ್ರೀಡಾ ಶಿಕ್ಷಣ ಶಿಕ್ಷಕ ಸುಜತ್ ಅಲಿ ಕಾರ್ಯಕ್ರಮ ನಿರೂಪಿಸಿದರು.
———————-ವಸಂತ್ ಕುಮಾರ್