ಹೊಳೆನರಸೀಪುರ:ಶ್ರೀರಂಗಪಟ್ಟಣ ಸಮೀಪದ ಸೋಮನಾಥೇಶ್ವರ ದೇವಾಲಯ, ಹಳೇ ಬೀಡಿನ ದೇವಾಲಯ, ಬೇಲೂರು ಚೆನ್ನಕೇಶವ ದೇವಾಲಯಗಳನ್ನ ಕಟ್ಟಿದ್ದು ಅಮರಶಿಲ್ಪಿ ಡಕಣಾಚಾರಿ. ಅವರು ಸೋಮನಾಥೇಶ್ವರ ದೇವಾಲಯವನ್ನು 15 ವರ್ಷ, ಬೇಲೂರಿನ ದೇವಾಲಯವನ್ನು 18 ವರ್ಷ ಕಟ್ಟಿದರು.ಡಕಣಾಚಾರಿ ತಮ್ಮ ಜೀವಿತಾ ಅವಧಿಯ ಅರ್ದದಷ್ಟು ಆಯಸ್ಸನ್ನು ದೇವಾಲಯ ಕೆತ್ತನೆಗೆ ಮೀಟಲಿಟ್ಟಿದ್ದರು ಎಂದು ಎಂದು ಶಿಕ್ಷಕ ಶಿವಕುಮಾರಾಚಾರ್ ವಿವರಿಸಿದರು.
ವಿಶ್ವಕರ್ಮ ಜನಾಂಗದವರು ಬುಧವಾರ ಇಲ್ಲಿನ ಕಾಳಿಕಾಂಬ ದೇವಾಲಯದಲ್ಲಿ ಆಯೋಜಿಸಿದ್ದ ಅಮರಶಿಲ್ಪಿ ಡಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ,ಸೋಮನಾಥೇಶ್ವರ ದೇವಾಲಯವನ್ನು ನೋಡಿದ ರಾಜ ಬಿಟ್ಟಿದೇವ ಹಿಂದೆ ಯಾರೂ ಕಟ್ಟಿಲ್ಲದ ಮುಂದೆ ಯಾರೂ ಕಟ್ಟಲು ಸಾಧ್ಯ ಇಲ್ಲದಂತಹ ಒಂದು ದೇವಾಲಯವನ್ನು ಕಟ್ಟಿಕೊಡಿ ಎನ್ನುವ ಮನವಿಗೆ ಡಕಣಾಚಾರಿ ಬೇಲೂರಿನ ಚೆನ್ನಕೇಶವ ದೇವಾಲಯ ನಿರ್ಮಿಸಿದರು. ಈಶಿಲ್ಪ ಕಲೆಗೆ ಮೆಚ್ಚಿದರಾಜರು ಡಕಣಾಚಾರಿಗೆ ಅಮರ ಶಿಲ್ಪಿ ಎನ್ನುವ ಬಿರಿದು ನೀಡಿದರು ಎಂದರು.
ಡಕಣಾಚಾರಿ ದೈಹಿಕವಾಗಿ ಇಲ್ಲದಿದ್ದರೂ ಅವರು ಅಮರರಾಗಿದ್ದಾರೆ.ಜನರು ಅವರನ್ನು ಅವರ ಶಿಲ್ಪಕಲೆಗಳಲ್ಲಿ ಕಾಣುತ್ತಿದ್ದಾರೆ. ಇದು ವಿಶ್ವಕರ್ಮ ಜನಾಂಗಕ್ಕೆ ಒಂದು ಹೆಮ್ಮೆ ಎಂದು ಹೇಳಿದರು.
ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಡಕಣಾಚಾರಿ ಅವರ ಭಾವಚಿತ್ರಕ್ಕೆ ಫುಫ್ಫ ನಮನ ಸಲ್ಲಿಸಿ, ಡಕಣಾಚಾರಿ ಅವರು ಯಾವುದೇ ವೈಜ್ಞಾನಿಕ ಯಂತ್ರೋಪಕರಣಗಳು ಇಲ್ಲದ ಸಮಯದಲ್ಲಿ ಕೇವಲ ಉಳಿ ಮತ್ತು ಸುತ್ತಿಗೆ ಬಳಸಿ ಅದ್ಭತವಾದ ದೇವಾಲಯಗಳನ್ನು ಕಟ್ಟಿದರು. ಅವರು ಕಟ್ಟಿರುವ ಬೇಲೂರು ಚೆನ್ನಕೇಶವ ದೇವಾಲಯ ವಿಶ್ವಪ್ರಸಿದ್ದಿ ಆಗಿದೆ. ನಮ್ಮ ದೇಶಕ್ಕೆ ವಿಶ್ವಕರ್ಮರು ಕೊಟ್ಟಿರುವ ಕೊಡುಗೆ ಅಪಾರ ಎಂದರು.
ಪುರಸಭಾಧ್ಯಕ್ಷ ಕೆ. ಶ್ರೀಧರ್ ಮಾತನಾಡಿದರು.ವಿಶ್ವಕರ್ಮ ಜನಾಂಗದ ಅಧ್ಯಕ್ಷ ಗಂಗಾಧರಾಚಾರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎಂಜಿನಿಯರ್ ಪ್ರಭಾಕರ್, ಪರ್ತಕರ್ತ ಅಶೋಕ್, ಪುರಸಭೆ ಮಾಜಿ ಸದಸ್ಯ ಮಹೇಶ್ ಭಾಗವಹಿಸಿದ್ದರು. ಶಿಕ್ಷಕ ರೇವಣ್ಣಾಚಾರ್ ಕಾರ್ಯಕ್ರಮ ನಿರೂಪಿಸಿದರು.
——–—-ಸುಕುಮಾರ್