ಹೊಳೆನರಸೀಪುರ:ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಹಗರುವಾಗಿ ಮಾತನಾಡಿದ್ದನ್ನು ಖಂಡಿಸಿ ದೇಶಧ್ಯಾಂತ ಪ್ರತಿಭಟನೆ ನಡೆಸಿದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ನಮ್ಮ ಹೋರಾಟವನ್ನು ತೀವ್ರ ಗೊಳಿಸುತ್ತಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್.ಸೋಮಶೇಖರ್ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ನಾನು ಪ್ರಧಾನಿ ಆಗಿದ್ದೇನೆ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರು, ಲೋಕಸಭೆಯಲ್ಲಿ ಅಂಬೇಡ್ಕರ್ ಅವರ ಹೆಸರನ್ನು ಅತ್ಯಂತ ಹಗುರುವಾಗಿ ಹಾಗೂ ವ್ಯಂಗ್ಯವಾಗಿ ಆಡಿದ ಅಮಿತ್ ಷಾ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳದೇ ಅವರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಆದ್ದರಿಂದ ಎಲ್ಲಾ ತಾಲ್ಲೂಕುಗಳಿಂದ ಜನವರಿ 8 ಕ್ಕೆ ಜಿಲ್ಲಾ ಕೇಂದ್ರಕ್ಕೆ ಬರುವ ಶೋಷಿತ ವರ್ಗದ ಜನರು, ಪ್ರಗತಿಪರರು, ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟವನ್ನು ಹಮ್ಮಿಕೊಂಡಿದ್ದೇವೆ. ಈ ಹೋರಾಟಕ್ಕೆ ಬೆಂಬಲ ನೀಡಲು ಹೊಳೆನರಸೀಪುರ ತಾಲ್ಲೂಕಿನಿಂದ 1 ಸಾವಿರಕ್ಕೂ ಹೆಚ್ಚು ಜನರು ತೆರಳುತ್ತಿದ್ದೇವೆ. ಎಲ್ಲರೂ ನಮ್ಮ ಪ್ರತಿಭಟನೆ ಯನ್ನು ಬೆಂಬಲಿಸಿ ಎಂದು ಕೋರಿದ್ದಾರೆ.
ಮಾದಿಗ ದಂಡೋರ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರಿಂದ ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಒಕ್ಕೂಟ ಅಮಿತ್ ಶಾ ಅವರನ್ನು ಕೈ ಬಿಡುವವರೆಗೆ ಹೋರಾಟ ನೆಡೆಸುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಅವರೂ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಸುಮ್ಮನಾಗಿದ್ದಾರೆ. ಆದ್ದರಿಂದ ನಾವು ಶೋಷಿತರು, ದಲಿತರು, ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯ ಒದಗಿಸಿಕೊಟ್ಟ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವರ ವಿರುದ್ದ ಕ್ರಮ ತೆಗೆದುಕೊಳ್ಳುವವರೆಗೆ ಹಂತ ಹಂತವಾಗಿ ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಮಹಿಳಾ ಸಂಚಾಲಕಿ ರಾಧಾಮಣಿ, ತಾಲ್ಲೂಕು ಸಂಚಾಲಕ ಚಿನ್ನಸ್ವಾಮಿ, ಎಚ್.ಡಿ. ಚಂದ್ರಶೇಖರ್, ರವಿ, ಮೋಹನ್ ಇತರರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.
————-ಸುಕುಮಾರ್