ಹೊಳೆನರಸೀಪುರ:ಅಮಿತ್ ಶಾ ನಮ್ಮ ಗೃಹ ಸಚಿವರಾಗಿರುವುದು ನಮ್ಮ ದೇಶಕ್ಕೆ ಅವಮಾನ-ಅಮಿತ್ ಶಾ ವಿರುದ್ಧ ಭಾರಿ ಪ್ರತಿಭಟನೆ-ಪ್ರತಿಕೃತಿ ದಹನ

ಹೊಳೆನರಸೀಪುರ:ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಹಗುರವಾದ ಮಾತುಗಳನ್ನಾಡಿ ಅವಮಾನ ಮಾಡಿದ್ದಾರೆ ಎಂದು ತಾಲ್ಲೂಕಿನ ವಿವಿಧ ದಲಿತಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಯ ಸದಸ್ಯರು ಸೋಮವಾರ ಅವರ ವಿರುದ್ದ ಪ್ರತಿಭಟನಾ ಮೆರವಣಿಗೆ ನಡೆಸಿ ಇಲ್ಲಿನ ಗಾಂಧೀ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನೆಡೆಸಿ,ಅಮಿತ್ ಶಾ ಅವರ ಪ್ರತಿಕೃತಿಯನ್ನು ದಹಿಸಿ,ನಂತರ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಕಚೇರಿ ಆವರಣದಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ವೈ. ಚಂದ್ರಶೇಖರ್, ದೇಶದ ಉತ್ತಮ ಆಡಳಿತಕ್ಕೆ ಒಳ್ಳೆಯ ಸಂವಿಧಾನ ನೀಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ದೇಶದಲ್ಲಿ ತಾಂಡವವಾಡುತ್ತಿದ್ದ ಜನರ ನಡುವಿನ ಅಸಮಾನತೆಯನ್ನು ಹೋಗಲಾಡಿಸಿ, ಕಟ್ಟಕಡೆಯ ವ್ಯಕ್ತಿಯೂ ಯಾವುದೇ ಅಧಿಕಾರನ್ನು ಬೇಕಾದರೂ ಹಿಡಿಯಲು ಅವಕಾಶ ಮಾಡಿಕೊಟ್ಟರು. ಬಿಜೆಪಿಯ ಅನೇಕರು ಇದರ ಅನುಕೂಲ ಪಡೆದುಕೊಂಡಿದ್ದಾರೆ. ಅದರ ಪರಿಜ್ಞಾನ ಇಲ್ಲದೆ ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇವರನ್ನು ಕೂಡಲೆ ಸಂಪುಟದಿಂದ ಕೈ ಬಿಡಬೇಕು ಎಂದರು.

ವಕೀಲ ಹರೀಶ್ ಮಾತನಾಡಿ, ಅಂಬೇಡ್ಕರ್ ಅವರ ಹೆಸರನ್ನು ಅನೇಕಬಾರಿ ವ್ಯಂಗ್ಯವಾಗಿ ಹೇಳಿದ ಅಮಿತ್ ಶಾ ಇಷ್ಟುಬಾರಿ ದೇವರ ಹೆಸರನ್ನು ಹೇಳಿದ್ದರೆ ದೇವರೇ ಒಲಿದುಬಿಡುತ್ತಿದ್ದ ಎಂದಿದ್ದಾರೆ. ದೀನ ದಲಿತರು, ಅಸಹಾಯಕರು, ಶೋಷಿತರು ಅಂಬೇಡ್ಕರ್ ಅವರನ್ನೇ ದೇವರೆಂದು ಕೊಂಡಿದ್ದಾರೆ. ದೇವರ ಹೆಸರನ್ನು ಶೋಷಿತರು ಮೇಲಿಂದ ಮೇಲೆ ಹೇಳಿದರೆ ತಪ್ಪೇನು. ಇದರಿಂದ ಅಮಿತ್ ಶಾ ಏಕೆ ವ್ಯಂಗ್ಯದ ಮಾತುಗಳನ್ನು ಆಡಬೇಕು. ಇಂತಹ ಮನಸ್ಥಿತಿ ಇರುವವರು ನಮ್ಮ ಗೃಹ ಸಚಿವರಾಗಿರುವುದು ನಮ್ಮ ದೇಶಕ್ಕೆ ಅವಮಾನ ಎನಿಸಿದೆ ಎಂದು ಕಿಡಿಕಾರಿದರು.

ದಲಿತ ಸಂಘರ್ಷ ಸಮಿತಿಯ ಸೋಮಶೇಖರ್ ಮಾತನಾಡಿ, ಭಾರತದಲ್ಲಿ ಅಂಬೇಡ್ಕರ್ ಹುಟ್ಟಿರದಿದ್ದರೆ ದೇಶ ಮನುವಾದಿಗಳ ಕೈಲಿ ಸಿಕ್ಕುತ್ತಿತ್ತು. ದೇಶದ ಎಲ್ಲ ಜನರು ಮೇಲ್ಜಾತಿಯವರ ದಾಸ್ಯದಲ್ಲಿ ಬದುಕಬೇಕಾಗಿತ್ತು. ಇದನ್ನು ತಪ್ಪಿಸಿ ಶೋಷಿತ ಜನರಿಗೆ ಸಮಾನತೆಯನ್ನು ತಂದುಕೊಟ್ಟ ಬಿ.ಆರ್. ಅಂಬೇಡ್ಕರ್ ಬಗ್ಗೆ ಮಾತನಾಡುವ ಹಕ್ಕು ಮತ್ತು ಯೋಗ್ಯತೆ ಬಿಜೆಪಿ ಅವರಿಗೆ ಇಲ್ಲ ಎಂದು ಹೇಳಿದರು.

ವಕೀಲರಾದ ಎಚ್.ಕೆ. ಮಂಜುನಾಥ್, ಎಂ.ವಿ. ಶಿವಕುಮಾರ್, ಕಾಮಾಕ್ಷಿ, ಜಯರಾಂ, ಲಕ್ಷ್ಮೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಲಕ್ಷ್ಮಣ, ಮುಖಂಡರಾದ ಡಾ. ವೆಂಕಟೇಶ್ ಮೂರ್ತಿ , ಐಚನಹಳ್ಳಿ ರಾಮಚಂದ್ರ, ಡೋನಾಲ್ಡ್ ರಂಗಸ್ವಾಮಿ, ಜವರೇಶ್, ರಾಘವೇಂದ್ರ, ಚಿನ್ನಸ್ವಾಮಿ, ಸದಾಶಿವ, ರಾಜೀವ್, ಕೃಷ್ಣಮೂರ್ತಿ, ಸುಪ್ರೀತ್ ಪಾಸ್ವಾನ್, ಅಶ್ವಥ, ಚಂದ್ರ, ಮಹೇಂದ್ರಬಾಬು, ರಂಗಸ್ವಾಮಿ, ಅಣ್ಣಯ್ಯ, ಇತರರು ಭಾಗವಹಿಸಿದ್ದರು.

——————-—ಸುಕುಮಾರ್

Leave a Reply

Your email address will not be published. Required fields are marked *

× How can I help you?