ಹೊಳೆನರಸೀಪುರ-ಸರಿಯಾದ ಸಮಯಕ್ಕೆ ಪಿಂಚಣಿ ವಿತರಿಸದ ಅಂಚೆ ಇಲಾಖೆ-ಸಿಂಗಾಪುರ ಶಾಖಾ ಅಂಚೆ ಕಚೇರಿ ಎಂದುರು ಪ್ರತಿಭಟನೆ

ಹೊಳೆನರಸೀಪುರ:ತಾಲ್ಲೂಕಿನ ಸಿಂಗಾಪುರ ಶಾಖಾ ಅಂಚೆ ಕಚೇರಿಯಲ್ಲಿ ಸಕಾಲಕ್ಕೆ ಎಲ್ಲರಿಗೂ ಪಿಂಚಣಿ ನೀಡುತ್ತಿಲ್ಲ ಎಂದು ಸುತ್ತಲ ಹತ್ತಾರು ಹಳ್ಳಿಗಳ ಜನರು ಮಂಗಳವಾರ ಪಟ್ಟಣದ ಮುಖ್ಯ ಅಂಚೇ ಕಚೇರಿ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿ ಶಾಖಾ ಅಂಚೆ ಕಚೇರಿಯ ಸಿಬ್ಬಂದಿಯ ಧೋರಣೆಯನ್ನು ಖಂಡಿಸಿದರು.

ಸರಕಾರ ನೀಡುತ್ತಿರುವ ಪಿಂಚಣಿ ಹಣ ಪಡೆಯಲು ಹೋದರೆ ಹಣ ಇಲ್ಲವೆಂದು ವಾಪಸ್ ಕಳುಹಿಸುತ್ತಾರೆ. ಈ ಶಾಖಾ ಅಂಚೆ ಕಚೇರಿ ವ್ಯಾಪ್ತಿಗೆ ಸಿಂಗಾಪುರ, ಈಡಿಗನಹೊಸೂರು, ಗುಂಜೇವು, ಮಾರನಾಯಕನಹಳ್ಳಿ, ಸೋಮನಹಳ್ಳಿ, ಜಕ್ಕವಳ್ಳಿ, ಜಕ್ಕವಳ್ಳಿಕೊಪ್ಪಲು, ಅಡಿಕೆ ಕೆರೆಹೊಸೂರು, ಉಲಿವಾಲ, ಉಲಿವಾಲಕೊಪ್ಪಲು, ಒಳಂಬಿಗೆ, ಮೂಳೆಕಾಳೇನಹಳ್ಳಿ, ಹಂಗರಹೊಸೂರು, ಲಕ್ಷ್ಮೀಪುರ ಗ್ರಾಮಗಳು ಒಳಪಡುತ್ತದೆ.

ಪ್ರತಿದಿನ ಪಟ್ಟಣದ ಅಂಚೆ ಇಲಾಖೆಯಿಂದ ಒಂದರಿಂದ ಎರಡು ಲಕ್ಷ ರೂ.ಗಳನ್ನು ಮಾತ್ರ ಪಿಂಚಣಿದಾರರಿಗೆ ವಿತರಣೆ ಮಾಡಲು ಕಳುಹಿಸುತ್ತಾರೆ, ಆದರೆ ಸಿಂಗಾಪುರ ಅಂಚೆ ವ್ಯಾಪಿಗೆ 16ಕ್ಕೂ ಹೆಚ್ಚು ಹಳ್ಳಿಗಳು ಒಳಪಡುತ್ತದೆ.ಸುತ್ತಲ ಹತ್ತಾರು ಹಳಿಗಳ ಜನರು ಐದಾರು ಕಿ.ಮಿ ಗಳಿಂದ ನಡೆದುಕೊಂಡು ವೃದ್ದರು ಪಿಂಚಣಿ ಪಡೆಯಲು ಸಾದ್ಯವಾಗದೇ ವಾಪ್ಪಸ್ಸು ಹೋಗುತ್ತಿದ್ದು ಇದರಿಂದ ತೀವ್ರ ತೊಂದರೆ ಆಗುತ್ತಿದೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.

ಸಿಂಗಾಪುರ ಗ್ರಾಮದ ರಘು ಮಾತನಾಡಿ, ಹಳ್ಳಿಗಳಿಗೆ ಅಂಚೆ ಪಾಲಕರ ಮೂಲಕ ಪಿಂಚಣಿ ಹಣ ವಿತರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ.ಕೆಲ ತಿಂಗಳ ಹಿಂದೆ ಅಂಚೆ ಇಲಾಖೆ ಬ್ಯಾಂಕಿಂಗ್ ವ್ಯವಸ್ಥೆ ಪ್ರಾರಂಭಿಸಿದ ನಂತರ ಸಿಂಗಾಪುರದಲ್ಲಿ ಒಂದು ಅಂಚೆ ಕಚೇರಿ ತೆರೆದು ಅಲ್ಲಿ ಹಣ ವಿತರಣೆ ಮಾಡಲಾಗುತ್ತಿದೆ.

ಪಿಂಚಣಿದಾರರು ಸುತ್ತಲ ಹತ್ತಾರುಗಳಿಗಳಿಂದ ಸಿಂಗಾಪುರಕ್ಕೆ ಬರಲು ಅಗತ್ಯ ಬಸ್ ವ್ಯವಸ್ಥೆ ಇಲ್ಲ. ಈ ಬಗ್ಗೆ ಶಾಖಾ ಅಂಚೆ ಕಚೇರಿಯಲ್ಲಿ ಎಲ್ಲರಿಗೂ ಒಮ್ಮೆ ಬಂದಾಗಲೇ ಪಿಂಚಣಿ ನೀಡಿ ಎಂದು ನಾವು ಎಷ್ಟೇ ಮನವಿ ಮಾಡಿದರೂ, ಸಮಸ್ಯೆ ಬಗೆಹರಿಯದ ಕಾರಣ ಪಿಂಚಣಿದಾರರನ್ನು ಕರೆತಂದು ಅನಿವಾರ್ಯವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಹೊಳೆನರಸೀಪುರ ಅಂಚೆ ಇಲಾಖೆಯ ಅಂಚೆ ಉಪ ನಿರೀಕ್ಷಕ ಮಹೇಶ್ ಮಾತನಾಡಿ, ನಮ್ಮ ಕಚೇರಿ ವ್ಯಾಪ್ತಿಯಲ್ಲಿ 18 ಶಾಖಾ ಕಚೇರಿಗಳಿದೆ. ಸಿಂಗಾಪುರ ಕಚೇರಿ ವ್ಯಾಪ್ತಿಯಲ್ಲಿ ಹೆಚ್ಚು ಹಳ್ಳಿಗಳು ಇರುವುದರಿಂದ ಇಂದಿನಿಂದ ಸಿಂಗಾಪುರ ಶಾಖಾ ಅಂಚೆ ಕಚೇರಿಗೆ ಪ್ರತಿನಿತ್ಯ ಮೂರು ಲಕ್ಷ ರೂ. ಕಳುಹಿಸುತ್ತೇನೆ.ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ ಹಿಲ್ಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದು ಹಳ್ಳಿಗಳಿಗೆ ತೆರಳಿದರು.

ಪ್ರತಿಭಟನೆಯಲ್ಲಿ ಮಾರನಾಯಕನಹಳ್ಳಿಯ ಪುಟ್ಟಮ್ಮ, ಚಂದ್ರಮ್ಮ, ಜಯಮ್ಮ, ಈಡಿಗನಹೊಸೂರಿನ ಸಣ್ಣಮ್ಮ, ಗೌರಮ್ಮ, ಉಲಿವಾಲದ ಮಂಜುಮ್ಮ, ಸಾವಿತ್ರಮ್ಮ, ಗುಂಜೇವು ಲಕ್ಷ್ಮಮ್ಮ, ರತ್ನಮ್ಮ, ಮೂಳೆಕಾಳೇನಹಳ್ಳಿಯ ಚನ್ನಬಸಪ್ಪ, ಸಿಂಗಾಪುರದ ಪರಮೇಶ, ರಾಮಯ್ಯ ಇತರರು ಭಾಗವಹಿಸಿದ್ದರು.

——————-ವಸಂತ್ ಕುಮಾರ್

Leave a Reply

Your email address will not be published. Required fields are marked *

× How can I help you?