ಹೊಳೆನರಸೀಪುರ:ಪಟ್ಟಣದ ಪೇಟೆ ಮುಖ್ಯರಸ್ತೆ, ಕೋಟೆ ಮುಖ್ಯರಸ್ತೆ, ರಿವರ್ ಬ್ಯಾಂಕ್ ರಸ್ತೆ, ನರಸಿಂಹನಾಯಕ ನಗರ, ಚಿಕನ್ ಮಾರುಕಟ್ಟೆ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ.
ಗುಂಪು, ಗುಂಪಾಗಿ ಓಡಾಡುವ ನಾಯಿಗಳು ಕೆಲವೊಮ್ಮೆ ಬೊಗಳುತ್ತಾ, ಕೆಲವೊಮ್ಮೆ ಕಚ್ಚಾಡುತ್ತಾ ಪಟ್ಟಣದಲೆಲ್ಲಾ ಆತಂಕ ಸೃಷ್ಟಿಸಿವೆ. ಓಡಿಸಲು ಯತ್ನಿಸಿದರೆ ಒಟ್ಟಾಗಿ ಮೇಲೆ ಬೀಳಲು ಬರುತ್ತವೆ.
ಕೆಲವು ದಿನಗಳ ಹಿಂದೆ ನರಸಿಂಹನಾಯಕ ನಗರ ಬಡಾವಣೆಯಲ್ಲಿ ನಾಯಿಗಳ ಹಿಂಡು ಬಾಲಕನೊಬ್ಬನ ಮೇಲೆ ಒಟ್ಟಾಗಿ ದಾಳಿ ನಡೆಸುವ ವೇಳೆ ಅಕ್ಕಪಕ್ಕದ ಜನರು ನೋಡಿ, ಕೋಲು ಬಡಿಗೆಗಳಿಂದ ನಾಯಿಗಳನ್ನು ಓಡಿಸಿ ಬಾಲಕನನ್ನು ರಕ್ಷಿಸಿದ್ದರು.
ಸಾರ್ವಜನಿಕರು ಸಕಾಲದಲ್ಲಿ ಬಾಲಕನ ಸಹಾಯಕ್ಕೆ ಬರದಿದ್ದರೆ ಅನಾಹುತ ನಡೆದು ಹೋಗುತ್ತಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯೂ ಪ್ರಕಟವಾಗಿತ್ತು. ವರದಿ ನೋಡಿದ ನಂತವೂ ಪುರಸಭೆಯವರು ನಾಯಿಗಳನ್ನು ಹಿಡಿಸಲು ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಪುರಸಭೆಯವರು ನಾಯಿಗಳನ್ನು ಹಿಡಿಸಲು ಕೂಡಲೆ ಕ್ರಮ ತೆಗೆದುಕೊಳ್ಳದಿದ್ದರೆ “ನಾಯಿ ಹಿಡಿಸಿ ಜನರನ್ನು ರಕ್ಷಿಸಿ” ಆಂದೋಲನ ಪ್ರಾರಂಭಿಸುತ್ತೇವೆ ಎಂದು ಜನಸ್ಪಂಧನ ವೇದಿಕೆಯ ಸದಸ್ಯರು ಎಚ್ಚರಿಸಿದ್ದಾರೆ.
—————ಸುಕುಮಾರ್