ಹೊಳೆನರಸೀಪುರ-ಬುದ್ದರ ಜೀವನ ದರ್ಶನವು ಇಂದಿಗೂ ಮಾನವ ಸಮಾಜಕ್ಕೆ ಮಾರ್ಗದರ್ಶಕವಾಗಿದೆ- ಡಾ. ವೆಂಕಟೇಶಮೂರ್ತಿ

ಹೊಳೆನರಸೀಪುರ, ಮೇ 12: ಆಸೆಯೇ ದುಃಖಕ್ಕೆ ಮೂಲ ಕಾರಣವೆಂದು ಭಗವಾನ್ ಬುದ್ಧರು ಸಾರಿದ್ದು, ಅವರ ಜೀವನ ದರ್ಶನವು ಇಂದಿಗೂ ಮಾನವ ಸಮಾಜಕ್ಕೆ ಮಾರ್ಗದರ್ಶಕವಾಗಿದೆ ಎಂದು ರಾಜ್ಯ ಬೌದ್ಧ ಮಹಾಸಭೆಯ ಸಂಚಾಲಕ ಡಾ. ವೆಂಕಟೇಶಮೂರ್ತಿ ಹೇಳಿದರು.

ತಾಲ್ಲೂಕು ಆಡಳಿತದಿಂದ ಸೋಮವಾರ ಆಯೋಜಿಸಲಾದ ಬುದ್ಧಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕ್ರಿಸ್ತ ಪೂರ್ವ 6ನೇ ಶತಮಾನದಲ್ಲಿ ನೇಪಾಳದಲ್ಲಿ ಭಗವಾನ್ ಬುದ್ಧರು ಜನಿಸಿದರು. ಶುದ್ಧೋದನ ರಾಜನ ಪುತ್ರರಾದ ಸಿದ್ಧಾರ್ಥರು, ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡು ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದರು. ಆತ್ಮಚಿಂತನೆಗಾಗಿ 6 ವರ್ಷಗಳ ತಪಸ್ಸು ನಡೆಸಿದ ಅವರು, ಹೀಗೆ ತಪಸ್ಸು ಮಾಡಿದ ಸಿದ್ದಾರ್ಥನಿಗೆ ಏನು ಸಿಕ್ಕಿತು ಎಂಬ ಪ್ರಶ್ನೆಗೆ, ‘ನನಗೇನೂ ಸಿಗಲಿಲ್ಲ, ಆದರೆ ರಾಗ, ದ್ವೇಷ, ಅಸೂಯೆ, ಕೋಪ, ಆಸೆ ಎಲ್ಲವನ್ನೂ ಕಳೆದುಕೊಂಡೆ’ ಎಂದು ಉತ್ತರಿಸಿದರು. ಅದುವೇ ಬುದ್ಧತ್ವ” ಎಂದು ವಿವರಿಸಿದರು.

ಉಪನ್ಯಾಸಕ ವೆಂಕಟೇಶ್ ಮಾತನಾಡುತ್ತಾ, “ಪಾಪಕಾರ್ಯಗಳಿಂದ ದೂರವಿದ್ದು, ಕಳ್ಳತನ, ಸುಳ್ಳು ಮಾತು, ಮಧ್ಯಪಾನ, ಪರಸ್ತ್ರೀ ವ್ಯಾಮೋಹ ಬಿಡುವುದು ಹಾಗೂ ಶಾಂತ ಜೀವನ ನಡೆಸುವುದು ಬುದ್ಧನ ಸುದೀರ್ಘ ಸಂದೇಶ” ಎಂದು ಹೇಳಿದರು. “ಇತ್ತೀಚೆಗೆ ಭಗವಾನ್ ಬುದ್ಧನ ಅನುಯಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರವೂ ಬುದ್ಧಪೂರ್ಣಿಮಾ ಆಚರಣೆಗಾಗಿ ಆದೇಶ ನೀಡಿರುವುದು ಸಂತೋಷದ ವಿಚಾರ” ಎಂದರು.

ತಾಲ್ಲೂಕು ಪಂಚಾಯತ್ ತಾಂತ್ರಿಕಾಧಿಕಾರಿ ಗೋಪಾಲ್ ಮಾತನಾಡಿ, “ಬುದ್ಧ ಜಯಂತಿ ಇಂದಿಗೂ ಅನೇಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ. ಭಗವಾನ್ ಬುದ್ಧರ ತತ್ವಾನುಸಾರ ನಡೆದು ಉತ್ತಮ ಬದುಕು ಕಟ್ಟಿಕೊಂಡವರು ಲಕ್ಷಾಂತರ ಜನರಿದ್ದಾರೆ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಗ್ರೇಡ್-2 ತಹಶೀಲ್ದಾರ್ ಲೋಕೇಶ್ ಉದ್ಘಾಟಿಸಿದರು. ಪುರಸಭಾ ಅಧ್ಯಕ್ಷ ಎಚ್.ಕೆ. ಪ್ರಸನ್ನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಲಕ್ಷ್ಮಣ, ವಕೀಲದಾರ ಎಚ್.ಆರ್. ಮಂಜುನಾಥ್, ಶಿಕ್ಷಕ ಅಣ್ಣಯ್ಯ, ಹರೀಶ್, ಸೋಮಶೇಖರ್, ಉದಯನಾರಾಯಣ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಚ್.ವೈ. ಚಂದ್ರಶೇಖರ್, ರಾಕೇಶ್, ದೇವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಿಕ್ಷಕ ಸುಜತ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಸ್ವಾಗತಿಸಿದರು.

Leave a Reply

Your email address will not be published. Required fields are marked *