ಹೊಳೆನರಸೀಪುರ:ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ,ಸಂಸದ ಶ್ರೇಯಶ್ ಪಟೇಲ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ ಹಾಗು ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರುತಿ ಗುಂಡೇಗೌಡ ದೂರಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಕಾರ್ಯಕ್ರಮವೊಂದರಲ್ಲಿ ಎಂ.ಪಿ. ಏನೂ ಕೆಲಸ ಮಾಡಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಎಂದಿದ್ದಾರೆ. ಆದರೆ ಕಾಂಗ್ರೆಸ್ ಜಾರಿಗೆ ತಂದಿರುವ 5 ಗ್ಯಾರೆಂಟಿ ಯೋಜನೆಗಳನ್ನು ಜೆಡಿಎಸ್ ಪಕ್ಷದವರೂ ತೆಗೆದುಕೊಳ್ಳುತ್ತಿದ್ದಾರೆ. ನಮ್ಮ ಮೇಲೆ ಆರೋಪ ಮಾಡಿರುವ ವಿಧಾನ ಪರಿಷತ್ ಸದಸ್ಯರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಗ್ಯಾರೆಂಟಿ ಯೋಜನೆಯ ಫಲ ಯಾರೂ ತೆಗೆದುಕೊಳ್ಳಬೇಡಿ ಎಂದು ಹೇಳಲಿ ಎಂದು ಸವಾಲು ಹಾಕಿದರು.
ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರುತಿ ಗುಂಡೇಗೌಡ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ದಿವಂಗತ ಪುಟ್ಟಸ್ವಾಮಿ ಗೌಡರ ಮೇಲೆ ದಾಖಲೆ ಇಲ್ಲದ ಆರೋಪ ಮಾಡಿದ್ದಾರೆ. ದೇವೇಗೌಡರ ಕುಟುಂಬದವರು ಅವರ ಸಹೋದರನ ಕುಟುಂಬಕ್ಕೆ ನೀಡಿದ ಮಿತಿ ಮೀರಿದ ತೊಂದರೆಯಿಂದ ಬೇಸತ್ತ ತಮ್ಮನ ಮಕ್ಕಳು ಮಾಡಬಾರದ ಕೃತ್ಯವನ್ನು ಮಾಡಿಬಿಟ್ಟರು. ಆ ಕೆಟ್ಟ ಘಟನೆಯನ್ನು ಅಂದೇ ನಾವೆಲ್ಲಾ ಖಂಡಿಸಿದ್ದೆವು. ಇದರ ಸತ್ಯಾಂಶ ಏನು ಎಂದು ರಾಜ್ಯದ ಜನರಿಗೆ ತಿಳಿದಿದೆ. ಈಗ ಹುರುಳು ಹಾಗೂ ಸ್ಯತ್ಯವಲ್ಲದ ಆರೋಪ ಮಾಡಿದ್ದಾರೆ. ಇವರು ಹಾಗೂ ಇವರ ಸಹೋದರ ಮಾಡಿರುವ ಘಟನೆಯಿಂದ ಹಾಸನ ಜಿಲ್ಲೆಗೇ ಕೆಟ್ಟ ಹೆಸರು ಬಂತು. ಜಿಲ್ಲೆಯ ಕೆಲವು ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದರು. ಇದೇ ಕಾರಣಕ್ಕೆ ಹಾಸನ ಜಿಲ್ಲೆಯ ಜನ ಲೋಕಸಭಾ ಚುನಾವಣೆಯಲ್ಲಿ ಸಚ್ಚಾರಿತ್ಯ ಹೊಂದಿರುವ ನಮ್ಮ ನಾಯಕ ಶ್ರೇಯಶ್ ಪಟೇಲ್ ಅವರನ್ನು ಗೆಲ್ಲಿಸಿದ್ದಾರೆ ಎಂದರು.
ಬಾಗೀವಾಳು ಮಂಜು ಮಾತನಾಡಿ, ವಿಧಾನ ಪರಿಷತ್ ಸದಸ್ಯರ ಕಾರ್ಯವೈಖರಿ ಹೇಗಿದೆ ಎಂದು ಹಾಸನ ಜಿಲ್ಲೆಯ ಜನರಿಗೆಲ್ಲಾ ಗೊತ್ತಾಗಿದೆ. ಇವರು ಕಾಂಗ್ರೆಸ್ ಮೇಲೆ ಆರೋಪ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯನ್ನೂ ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಗೆದ್ದೇಗೆಲ್ಲುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಲೋಕೇಶ್, ಸುರೇಶ್, ಮಾರಗೌಡನಹಳ್ಳಿ ರವಿ, ವಕೀಲ ಪ್ರಸಾದ್, ಅಲಿ ಮದದ್, ಎಚ್.ಬಿ. ಪ್ರಸನ್ನ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
——————-—–ಸುಕುಮಾರ್