ಹೊಳೆನರಸೀಪುರ-ನರ್ಸಿಂಗ್ ಕಾಲೇಜಿನ’ಗಡ್ಡ’ದ ವಿವಾದ-ನಿಯಮ ಪಾಲಿಸದೇ ವಿವಾದ ಸೃಷ್ಟಿಸಿರುವ ವಿದ್ಯಾರ್ಥಿಗಳು-ಪ್ರಾಂಶುಪಾಲ ಚಂದ್ರಶೇಖರ್ ರಿಂದ ಸ್ಪಷ್ಟನೆ

ಹೊಳೆನರಸೀಪುರ:ಇಲ್ಲಿನ ಸರ್ಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ವಸ್ತ್ರ ಸಂಹಿತೆ ಪಾಲಿಸಿ, ಶುಚಿಯಾದ ಸಮವಸ್ತ್ರ ಧರಿಸಿ,ಗಡ್ಡವನ್ನು ಟ್ರಿಂ ಮಾಡಿ, ಕ್ಲಿನಿಕಲ್‌ ಲ್ಯಾಬ್‌ಗೆ ಹೋಗುವಾಗ ಶೂ ಧರಿಸಿ ಎಂದು ತಿಳಿ ಹೇಳಿದ್ದಕ್ಕೆ ವಿವಾದ ಸೃಷ್ಟಿಯಾಗಿದೆ.

ಕಾಲೇಜಿನಲ್ಲಿ ರಾಜ್ಯ ಹಾಗೂ ದೇಶದ ನಾನಾ ಜಿಲ್ಲೆಗಳಿಂದ ಆಗಮಿಸಿದ ಒಟ್ಟು 330 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಕಳೆದ ಕೆಲವಾರು ವರ್ಷಗಳಿಂದ ಶೇ 100 ಫಲಿತಾಂಶ ಬಂದಿದ್ದು, ರಾಜ್ಯದಲ್ಲಿ ಉತ್ತಮ ಕಾಲೇಜು ಎನ್ನುವ ಪ್ರಶಂಶೆಗೆ ಪಾತ್ರವಾಗಿದೆ.

ಈ ಕಾಲೇಜಿನ ಎಲ್ಲಾ ಅಧ್ಯಾಪಕರು ಶಿಸ್ತಿ ನಿಂದ ಪಾಠ ಪ್ರವಚನಗಳನ್ನು ಮಾಡುತ್ತಿದ್ದು ವಿದ್ಯಾರ್ಥಿಗಳೂ ಕಾಲೇಜಿನಲ್ಲಿ ಶಿಸ್ತು ಹಾಗೂ ಕಾಲೇಜಿನ ನಿಯಮಗಳನ್ನು ಪಾಲಿಸಬೇಕೆಂದು ತಾಕೀತು ಮಾಡುತ್ತಾರೆ.

ಜಮ್ಮು ಮತ್ತು ಕಾಶ್ಮೀರದಿಂದ ಪ್ರಧಾನ ಮಂತ್ರಿ ವಿಶೇಷ ಸ್ಕಾಲರ್‌ ಶಿಪ್‌(ಪಿ.ಎಂ.ಎಸ್.ಎಸ್)‌ ಯೋಜನೆ ಅಡಿಯಲ್ಲಿ ಈ ವರ್ಷ ಬಂದಿರುವ 7 ವಿದ್ಯಾರ್ಥಿಗಳೂ ಸೇರಿ ಜಮ್ಮು ಕಾಶ್ಮೀರದ ಒಟ್ಟು 14 ವಿದ್ಯಾಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ರಾಜ್ಯದ ವಿದ್ಯಾರ್ಥಿಗಳೂ ಸೇರಿಂದತೆ ಕೆಲವು ವಿದ್ಯಾರ್ಥಿಗಳು ಕ್ಲಿನಿಕಲ್‌ ಲ್ಯಾಬಿಗೆ ಶುಚಿಯಾಗಿ, ಶೂ ಧರಿಸಿ ಬಾರದೆ, ಗಡ್ಡವನ್ನು ಟ್ರಿಂ ಮಾಡದೆ ಬರುತ್ತಿದ್ದರು. ಇವರಿಗೆ ಆಗಾಗ ಹಲವಾರು ಬಾರಿ ಹೇಳಿದ್ದರೂ ಅವರು ತಿದ್ದಿಕೊಂಡಿರಲಿಲ್ಲ. ಸೆಪ್ಟಂಬರ್‌ 8 ರಂದು ಶಿಚಿಯಾಗಿ, ಶೂ ಧರಿಸಿ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯ ಕ್ಲಿನಿಕಲ್‌ ಲ್ಯಾಬಿಗೆ ಬಾರದ ಗಿರೀಶ್‌, ಚನ್ನಬಸವನಗೌಡ, ಮನೋಜ್‌, ರುದ್ರೇಶ್‌, ಸಮೀರ್‌, ಉಮರ್‌, ಆದಿಲ್‌ ಸೇರಿದಂತೆ 18 ವಿದ್ಯಾರ್ಥಿಗಳನ್ನು ಕ್ಲಿನಿಕಲ್‌ ಲ್ಯಾಬ್‌ನ ಮಾರ್ಗದರ್ಶಕ ವಿಜಯಕುಮಾರ್‌ ಲ್ಯಾಬ್‌ಗೆ ಸೇರಿಸದೆ ಹೊರಗಡೆ ನಿಲ್ಲಿಸಿದ್ದರು.

ನಂತರ ಕೆಲವರು ಈ ವಿಷಯವನ್ನು ಮುಚ್ಚಿಟ್ಟು ಮುಸ್ಲಿಂ ಯುವಕರಿಗೆ ಗಡ್ಡ ಬೋಳಿಸಲು ಹೇಳಿದರು ಎಂದು ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿ ವಿವಾಧ ಸೃಷ್ಟಿಸಿದ್ದಾರೆ ಎಂದು ಪ್ರಾಂಶುಪಾಲ ಚಂದ್ರಶೇಖರ್‌ ಮಾಹಿತಿ ನೀಡಿದ್ದಾರೆ.

ನಮ್ಮ ಕಾಲೇಜಿನಲ್ಲಿ ನಾವು ಯಾರಿಗೂ ಗಡ್ಡಬೋಳಿಸಲು ಹೇಳಿಲ್ಲ, ಶುಚಿಯಾಗಿ ಕಾಲೇಜಿನ ನಿಯಮದಂತೆ ಬನ್ನಿ ಎಂದು ಹೇಳಿದ್ದೇವೆ. ಆದರೆ ಕೆಲವು ಯುವಕರು ಕಾಲೇಜಿನ ನಿಯಮ ಪಾಲಿಸದೆ ಇರುವುದು ನಮಗೆ ಬೇಸರ ತರಿಸಿದೆ. ನಾವು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲು ನಮ್ಮ ಕರ್ತವ್ಯವನ್ನು ಶ್ರದ್ದೆಯಿಂದ ಮಾಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

———ವಸಂತ್ ಕುಮಾರ್

Leave a Reply

Your email address will not be published. Required fields are marked *

× How can I help you?