ಹೊಳೆನರಸೀಪುರ:ಪಟ್ಟಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಡಿಸೆಂಬರ್ 21ರ ಶನಿವಾರ ಶ್ರೀ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ತಯಾರಿ ನಡೆಸಲಾಗುತ್ತಿದೆ.
ಇದರ ಅಂಗವಾಗಿ ಇಡೀ ಪಟ್ಟಣವನ್ನು ಕೇಸರಿ ದ್ವಜ ಹಾಗೂ ಕೇಸರಿ ಬಂಟಿಂಗ್ ಗಳಿಂದ ಸಿಂಗರಿಸಿದ್ದಾರೆ. ಎಲ್ಲಾ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಗಳಿಂದ ಸಿಂಗರಿಸಿ ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಿದ್ದಾರೆ.
ಹನುಮ ಜಯಂತಿ ಆಚರಣಾ ಸಮಿತಿಯನ್ನು ರಚಿಸಿಕೊಂಡಿರುವ ನೂರಾರು ಯುವಕರು ಹಗಲು ರಾತ್ರಿ ಎನ್ನದೆ ಪಟ್ಟಣವನ್ನು ಸಿಂಗರಿಸುವ, ಜನರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಚರಣಾ ಸಮಿತಿಗೆ ಅಧ್ಯಕ್ಷರು ಕಾರ್ಯದರ್ಶಿ ಎಂದು ನೇಮಿಸಿಕೊಳ್ಳದೆ ಎಲ್ಲರೂ ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದಾರೆ.
ತಾಲ್ಲೂಕಿನ ಪ್ರತೀಹಳ್ಳಿಗಳಿಗೆ ತೆರಳಿ ಬಿತ್ತಿಪತ್ರಗಳನ್ನು ಹಂಚಿ ಹನುಮಜಯಂತಿ ಆಚರಣೆಗೆ ಆಹ್ವಾನಿಸಿದ್ದಾರೆ.ಜಾತಿ ಬೇಧ ಇಲ್ಲದೆ, ಪಕ್ಷಪಾತ ಇಲ್ಲದೆ ಶ್ರದ್ದೇ ಹಾಗೂ ಭಕ್ತಿಯಿಂದ ಆಚರಿಸುತ್ತಿರುವ ಹನುಮಜಯಂತಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಎಂದು ಆಹ್ವಾನಿಸಿದ್ದಾರೆ. ಜೊತೆಗೆ ಹನುಮ ಜಯಂತಿ ಆಚರಣಾ ಸಮಿತಿ ವಾಟ್ಸ್ ಆಪ್ ಗ್ರೂಪ್ ರಚಿಸಿಕೊಂಡಿರುವ ಸಮಿತಿಯವರು ಸಾವಿರಾರು ಜನರಿಗೆ ಮಾಹಿತಿ ನೀಡಿದ್ದಾರೆ. ಇದಲ್ಲದೆ ಪ್ರಮೋದ್ ಮುತಾಲಿಕ್, ಚಲನಚಿತ್ರ ನಟ ಗಣೇಶ್ ಸೇರಿದಂತೆ ಅನೇಕ ನಟ, ನಟಿಯರು ಹೊಳೆನರಸೀಪುರದ ಹನುಮಜಯಂತಿ ಕಾರ್ಯಕ್ರಮದಲ್ಲಿ ಬಂದು ಭಾಗವಹಿಸಿ ಎಂದು ಆಹ್ವಾನಿಸಿರುವ ವಿಡಿಯೂ ತುಣುಕುಗಳನ್ನು ಸಮಾಜಿಕ ತಾಣಗಳ ಗ್ರೂಪ್ಗಳಲ್ಲಿ ಹರಿಬಿಟ್ಟಿದ್ದು ಈ ಮೂಲಕ ಜನರಲ್ಲಿ ದಿನೇ ದಿನೇ ಹನುಮ ಜಯಂತಿಯಲ್ಲಿ ಭಾಗವಹಿಸಬೇಕೆಂಬ ಉತ್ಸಾಹ ಹೆಚ್ಚಿಸುತ್ತಿದ್ದಾರೆ.
ಡಿಸೆಂಬರ್ 21 ರಂದು ಬೆಳಿಗ್ಗೆ 9 ಗಂಟೆಯಿಂದ ನರಸಿಂಹಸ್ವಾಮಿ ದೇವಸ್ಥಾನ ಸಮೀಪದಿಂದ ಅಲಂಕೃತ ವಾಹನದಲ್ಲಿ ಹನುಮನನ್ನು ಕೂರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನೆಡೆಸಲಿದ್ದಾರೆ. ಮಧ್ಯಾಹ್ನ ಉತ್ಸವದಲ್ಲಿ ಭಾಗವಹಿಸುವವವರಿಗೆ ಉಪಹಾರದ ವ್ಯವಸ್ಥೆ ಮಾಡಿದ್ದಾರೆ. ಹನುಮ ಜಯಂತಿ ಉತ್ಸವ ಹಾಗೂ ಮೆರವಣಿಗೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಆಚರಣಾ ಸಮಿತಿಯವರು ತಿಳಿಸಿದ್ದಾರೆ.
———-ಸುಕುಮಾರ್