ಹೊಳೆನರಸೀಪುರ:ಬಡ ರೋಗಿಗಳಿಂದ ಹಣ ಪೀಕಿದರೆ ದೇವರು ನಿಮ್ಮನ್ನು ಕ್ಷಮಿಸಲ್ಲ-ಆಸ್ಪತ್ರೆಗೆ ಒಳ್ಳೆಯ ಹೆಸರು ತನ್ನಿ ಹೆಚ್.ಡಿ ರೇವಣ್ಣ ಸೂಚನೆ

ಹೊಳೆನರಸೀಪುರ:ಇತ್ತೀಚಿನ ದಿನಗಳಲ್ಲಿ ನಮ್ಮೂರಿನ ಸರಕಾರಿ ಆಸ್ಪತ್ರೆಯ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದೆ.ಇತ್ತೀಚೆಗೆ ಬಂದಿರುವ ಸ್ತ್ರೀ ರೋಗ ತಜ್ಞರೊಬ್ಬರು ಹೆರಿಗೆ ಮಾಡಿಸಲು ಇಂತಿಷ್ಟೇ ಹಣ ನೀಡಬೇಕು ಇಲ್ಲದಿದ್ದರೆ ಹೆರಿಗೆ ಮಾಡಲ್ಲ ಎನ್ನುತ್ತಿದ್ದಾರಂತೆ ಇದೆಲ್ಲ ಇಲ್ಲಿ ನಡೆಯಲ್ಲ.ತಪ್ಪುಗಳನ್ನು ಸರಿಪಡಿಸಿಕೊಳ್ಳಲು ತಿಳಿಸಿ ಎಂದು ಶಾಸಕ ಹೆಚ್ ಡಿ ರೇವಣ್ಣ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಕರ್ ಗೆ ಸೂಚಿಸಿದರು.

ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು,ಬಡವರಿಗೆ ಚಿಕಿತ್ಸೆ ನೀಡಲು ಹಣಕ್ಕೆ ಒತ್ತಾಯಿಸಿದರೆ ನಿಮಗೆ ಒಳ್ಳೆಯದಾಗಲ್ಲ. ಆ ದೇವರಿಗಾದರು ಹೆದರಿ ಕೆಲಸ ಮಾಡಿ. ಆಸ್ಪತ್ರೆಯಲ್ಲಿ ಔಷಧಿಗಳು ಸಿಗುತ್ತಿಲ್ಲ ಎಂದು ಕೆಲವು ದಿನಗಳ ಹಿಂದೆ ಎಲ್ಲಾ ಪ್ರತಿಕೆಗಳಲ್ಲೂ ವರದಿ ಆಗಿತ್ತು.ಯಾಕೆ ಹೀಗಾಗುತ್ತಿದೆ ಇದನ್ನು ಗಮನಿಸಿ ಸರಿಪಡಿಸಿ ಎಂದು ಹೇಳಿದರು.

ರಾತ್ರಿ ವೇಳೆ ಯಾವಾಗಲೂ ತರಬೇತಿ ವೈದ್ಯರೇ ಇರುತ್ತಾರೆ. ಕರ್ತವ್ಯ ನಿರತ ವೈದ್ಯರು ಜೊತೆಯಲ್ಲಿರಬೇಕು. ಅವರ ಜೊತೆ ಸಾಕಷ್ಟು ದಾದಿಯರೂ ಕರ್ತವ್ಯದಲ್ಲಿ ಇರುವಂತೆ ನೋಡಿಕೊಳ್ಳಿ. ನೀವು ನಿಮ್ಮ ನರ್ಸಿಂಗ್ ಕಾಲೇಜಿನಿಂದ ವಿದ್ಯಾರ್ಥಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿ ಎಂದು ಸರಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ರವರಿಗೆ ತಿಳಿಸಿದರು.

ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆಸ್ಪತ್ರೆಗೆ ಬೇಕಾದ ಸಿ.ಟಿ. ಸ್ಕ್ಯಾನ್, ಡಯಾಲಿಸಿಸ್ ಸೌಲಭ್ಯ, ಅಗತ್ಯಕ್ಕೆ ತಕ್ಕಷ್ಟು ಕೊಠಡಿಗಳು, ಅಗತ್ಯ ತಕ್ಕಷ್ಟು ವೈದ್ಯರನ್ನು ಹಾಕಿಸಿದ್ದೇನೆ. ಇಷೆಲ್ಲಾ ಸೌಲಭ್ಯಗಳನ್ನು ನೀಡಿದ್ದೇನೆ. ನೀವು ಬಡರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಔಷಧಿ ನೀಡಿ ನಮ್ಮ ಆಸ್ಪತ್ರೆಗೆ ಒಳ್ಳೆಯ ಹೆಸರು ತನ್ನಿ.

ಕೆಲವು ವೈದ್ಯರು ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ನಾನು ಎಲ್ಲಾ ವೈದ್ಯರಿಂದ ಇಂತಹ ಸೇವೆಯನ್ನೇ ನಿರೀಕ್ಷಿಸುತ್ತೇನೆ. ಉತ್ತಮ ಸೇವೆ ನೀಡಿ ನಮ್ಮ ಆಸ್ಪತ್ರೆಯ ಘನತೆಯನ್ನು ಹೆಚ್ಚಿಸಿ ಎಂದರು.

ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಎಚ್.ವಿ. ಸುರೇಶ್ ಕುಮಾರ್ ಮಾತನಾಡಿ, ಇತ್ತೀಚೆಗೆ ಸುಭ್ರಹ್ಮಣ್ಯ ಎಂಬ ವ್ಯಕ್ತಿ ಎದೆನೋವು ಎಂದು ಬಂದಾಗ ತರಬೇತಿ ವೈದ್ಯರೊಬ್ಬರು ಸರಿಯಾಗಿ ಪರಿಶೀಲಿಸದೆ ಗ್ಯಾಸ್ಟ್ರಿಕ್ ಎಂದು ಮಾತ್ರೆ ಕೊಟ್ಟು ಕಳುಹಿಸಿದ್ದರು.ಆತ ಮನೆಗೆ ಹೋಗುತ್ತಿದ್ದಂತೆ ಸಾವನ್ನಪ್ಪಿದರು. ಇತ್ತೀಚೆಗೆ ರಾತ್ರಿ ವೇಳೆ ಆಸ್ಪತ್ರೆಗೆ ಬಂದ ರೋಗಿಗೆ ಟಿ.ಟಿ. ಇಂಜೆಕ್ಷನ್ ಸಹ ಇಲ್ಲವೆಂದು ಎಂದು ವಾಪಾಸ್ ಕಳುಹಿಸಿದ್ದಾರೆ. ಕೆಲವು ದಾದಿಯರು ರೋಗಿಗಳೊಂದಿಗೆ ಸಮಾಧಾನವಾಗಿ ಮಾತನಾಡದೇ ಸದಾ ರೇಗಾಡುತ್ತಿರುತ್ತಾರೆ ಎಂದು ದೂರಿದರು.

ಶಾಸಕ ರೇವಣ್ಣ ಮುಂದೆ ಇಂತಹ ದೂರುಗಳು ಬರದಂತೆ ನೋಡಿಕೊಳ್ಳಿ ಎಂದು ವೈದ್ಯರಿಗೆ, ದಾದಿಯರಿಗೆ ಸೂಚಿಸಿದರು. ವೈದ್ಯಾಧಿಕಾರಿ ಡಾ. ಧನಶೇಖರ್ , ಟಿ.ಎಚ್.ಓ. ಡಾ. ರಾಜೇಶ್ ವೈದ್ಯರಾದ ಸೆಲ್ವಕುಮಾರ್, ದಿನೇಶ್, ಡಾ.ರಾಮು, ಸತ್ಯಪ್ರಕಾಶ್, ನಾಗೇಂದ್ರ, ರೇಖಾ, ಅಜಯ್, ಕುಸುಮಾ, ಅಶ್ವಥಿ, ಲೋಕೇಶ್, ಬಾಲಕೃಷ್ಣ ಸಹಾಯಕ ಆಡಳಿತಾಧಿಕಾರಿ ಚಿನ್ನಮ್ಮ, ದಾದಿಯರು, ಸ್ವಚ್ಚತಾ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.

——————ಸುಕುಮಾರ್

Leave a Reply

Your email address will not be published. Required fields are marked *

× How can I help you?