ಹೊಳೆನರಸೀಪುರ:ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ.ಹತ್ತಾರು ಭಾಷೆ, ಅನೇಕ ಧರ್ಮ, ವಿವಿಧ ಬಗೆಯ ಆಚರಣೆಗಳನ್ನು ಹೊಂದಿರುವ ನಮ್ಮ ಭವ್ಯ ಭಾರತವನ್ನು ಕಟ್ಟಲು ಅನೇಕರು ಶ್ರಮಿಸಿದ್ದಾರೆ.ಇಂತಹ ದೇಶದಲ್ಲಿ ಕನ್ನಡ ನಾಡು ಎಲ್ಲ ಭಾಷೆಯವರಿಗೂ ಆಶ್ರಯಕೊಟ್ಟು ಅತ್ಯಂತ ಶ್ರೀಮಂತ ಭಾಷೆ ಎನಿಸಿದೆ ಎಂದು ಹೊಳೆನರಸೀಪುರ ಗೃಹ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಚಿಕ್ಕಮಗಳೂರು ಗಣೇಶ್ ತಿಳಿಸಿದರು.
ತಾಲ್ಲೂಕಿನ ಪಡವಲಹಿಪ್ಪೆ ಎಚ್ ಡಿ ದೇವೇಗೌಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕನ್ನಡ ಹಬ್ಬ ಮತ್ತು ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅತ್ಯಂತ ಹಳೆಯಭಾಷೆಯಾದ ನಮ್ಮ ಕನ್ನಡ.ತನ್ನ ಚರಿತ್ರೆಯ ಉದ್ದಕ್ಕೂ ಸಂಪರ್ಕಕ್ಕೆ ಬಂದ ಎಲ್ಲಾ ಭಾಷೆಗಳೊಂದಿಗೆ ಬಾಂಧವ್ಯ ಬೆಸದುಕೊಂಡಿದೆ.ಕನ್ನಡ ಭಾಷೆಯ ಲಿಪಿಯನ್ನು ಲಿಪಿಗಳ ರಾಣಿ ಎಂದು ಆಚಾರ್ಯ ವಿನೋಭಾ ಭಾವೆ ಕರೆದಿದ್ದಾರೆ.ಕನ್ನಡ ವೈಜ್ಞಾನಿಕವಾದ ಭಾಷೆ. ಕನ್ನಡ ಭಾಷೆ ಕ್ರಿಶ್ತಶಕ ಒಂದನೇ ಶತಮಾನಕ್ಕೂ ಹಳೆಯದು. ಕನ್ನಡವನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರದು. ನಮಗೆ ಎಲ್ಲಾ ಭಾಷೆಗಳ ಮೇಲೆ ಅಭಿಮಾನ ಇರಲಿ. ಕನ್ನಡಕ್ಕೆ ತಾಯಿಸ್ಥಾನ ಇರಲಿ ಎಂದು ಹೇಳಿದರು.
ಸಂಸ್ಕೃತ ಭಾಷೆ ಸಮೃದ್ಧವಾಗಿದ್ದ ಸಂದರ್ಭದಲ್ಲಿ ಕನ್ನಡದಲ್ಲಿ ಮೇರು ಕೃತಿಗಳನ್ನು ಕೊಟ್ಟ ಪಂಪ ಮೊದಲ ಕನ್ನಡಪರ ಹೋರಾಟಗಾರ. ಕನಕದಾಸರು ದಾಸರಲ್ಲಿಯೇ ಶ್ರೇಷ್ಠರು. ಕನಕದಾಸರ 14 ನೇ ಶತಮಾನದ ಕೃತಿಗಳು, ಕೀರ್ತನೆಗಳು ಇಂದಿಗೂ ಪ್ರಸ್ತುತ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತ ಗ್ಯಾರಂಟಿ ರಾಮಣ್ಣ ಮತ್ತು ಅವರ ತಂಡದ ಅನುಷಾ ಕನ್ನಡ ಗೀತೆಗಳು, ತತ್ವಪದಗಳು. ಕೀರ್ತನೆಗಳನ್ನು ಹಾಡಿ ರಂಜಿಸಿದರು.
ಹಳೇಬೀಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಿ ಡಿ ನಾರಾಯಣ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸಿ,8 ಜ್ಞಾನ ಪೀಠ ಪ್ರಶಸ್ತಿಗಳನ್ನು ತಂದು ಕೊಟ್ಟ ನಮ್ಮಸಾಹಿತಿಗಳು ಸರಸ್ವತಿಯ ಪುತ್ರರು ಎಂದು ಬಣ್ಣಿಸಿದರು.
ಪ್ರಾಂಶುಪಾಲರಾದ ಕೆ.ಸಿ. ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು.ಪಿ. ಆರ್.ಶಿವಕುಮಾರ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಸಿ.ಎಸ್.ಅನಂತ್ ಕುಮಾರ್ ಸ್ವಾಗತಿಸಿದರು.ದೀಪು ವಂದಿಸಿದರು.
——-—–ವಸಂತ್ ಕುಮಾರ್