ಹೊಳೆನರಸೀಪುರ:ಹಾಸನಾಂಬ ಜಾತ್ರೆ, ದಸರಾ ವಿದ್ಯುತ್ ದೀಪಾಲಂಕಾರಗಳನ್ನು ನೆನಪಿಸುವ ರೀತಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿ ನಮ್ಮೂರಿನ ಇತಿಹಾಸದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಇದೇ ಮೊದಲು. ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ. ಪುಟ್ಟರಾಜು ಎಸ್.ಎಲ್.ಎನ್ ಯುವಕ ಸಂಘ ಹಾಗೂ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಜೊತೆಯಲ್ಲಿ ಸಾರ್ವಜನಿಕರ ಸಹಕಾರದಿಂದ ನಡೆಯುತ್ತಿರುವ 4 ದಿನಗಳ ಕಾಲದ ಈ ರಾಜ್ಯೋತ್ಸವ ಅವಿಸ್ಮರಣೀಯ ಎಂದು ಸಂಸದ ಶ್ರೇಯಶ್ ಎಂ. ಪಟೇಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಆಯೋಜಿಸಿರುವ ನಾಲ್ಕುದಿನಗಳ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿ ಕನ್ನಡ ಸರಿಗಮಪ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡಿನಲ್ಲಿ ನಮ್ಮ ಕನ್ನಡ ಭಾಷೆಗೆ ಮೊದಲ ಸ್ಥಾನ. ಎಲ್ಲಾ ಭಾಷೆಗಳ ಬಗ್ಗೆ ಅಭಿಮಾನ ಇರಲಿ. ಕನ್ನಡ ಭಾಷೆಗೆ ತಾಯಿಸ್ಥಾನ ಇರಲಿ. ದೇಶ ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಇಂದಿನ ದಿನದಲ್ಲಿ ನಮ್ಮ ಹಳೆಯ ಸಂಸ್ಕೃತಿ ಮಾಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ನಾಡಿನ ಕುಸ್ತಿ ಕಲೆಯನ್ನು ನೆನಪಿಸಲು ಶುಕ್ರವಾರ ರಾಜ್ಯಮತ್ತು ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯನ್ನು ಏರ್ಪಡಿಸಿರುವುದು ಶ್ಲಾಘನೀಯವಾದದ್ದು.
ಶನಿವಾರ ಗಿಜ್ಜಿ ಗಿಲಿ ಗಿಲಿ ತಂಡದ ಕಾರ್ಯಕ್ರಮ,ಭಾನುವಾರ ಭುವನೇಶ್ವರಿ ದೇವಿಯ ಮೆರವಣಿಗೆ ಹಲವು ಹತ್ತು ಕಲಾತಂಡಗಳ ಜೊತೆಯಲ್ಲಿ ನಡೆಯಲಿದ್ದು ಎಲ್ಲರೂ ಈ ಕಾರ್ಯಕ್ರಮಗಳಲ್ಲಿ ಶಾಂತ ರೀತಿಯಿಂದ ಭಾಗವಹಿಸಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಗುಂಜೇವು ಅಣ್ಣಾಜಪ್ಪ, ಯೋಗಗುರು ಗಣೇಶ್ ಬಾಬು ಇತರರನ್ನು ಸನ್ಮಾನಿಸಿದರು.
ಐಪಿಎಸ್ ಅಧಿಕಾರಿ ಡಿ.ವೈ.ಎಸ್. ಪಿ ಶಾಲು, ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ. ಪುಟ್ಟರಾಜು, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ. ಸುರೇಶ್ ಕುಮಾರ್ ,ಎಚ್.ಟಿ. ಲಕ್ಷ್ಮಣ, ಹಿರಿಯ ವಕೀಲರಾದ ಭಾಷ್ಯಂ, ನಿವೃತ್ತ ಉಪನ್ಯಾಸಕ ಎಚ್.ಎಸ್. ಪ್ರಭುಶಂಕರ್ ಪುರಸಭೆ ಮಾಜಿ ಸದಸ್ಯ ಓಲೆ ಕುಮಾರ್, ಉಮೇಶ್, ಕಾರ್ತಿಕ್, ಬಾಲಾಜಿ, ಬಸವ, ಬಾಗೀವಾಳು ಮಂಜು, ಸುದರ್ಶನ್ ಬಾಬು, ಉಪಸ್ಥಿತರಿದ್ದರು.
ನಂತರ ಸರಿಗಮಪ ತಂಡದ ಪುರುಷೋತ್ತಮ್, ಕಂಬದ ರಂಗಯ್ಯ, ಶಿವಾನಿ, ಹಾಗೂ ಡಿ.ಕೆ.ಡಿ ತಂಡದ ಸದಸ್ಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಜನರನ್ನು ರಂಜಿಸಿತು.
ಸಂಸದ ಶ್ರೇಯಶ್ ಪಟೇಲ್ 1 ಗಂಟೆಗೂ ಹೆಚ್ಚುಕಾಲ ಕುಳಿತು ಸಾಂಸ್ಕೃತಿಕ ಕಾರ್ಯಕಮವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
—————––ವಸಂತ್ ಕುಮಾರ್