ಹೊಳೆನರಸೀಪುರ:ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ವಿವಿಧ ಬಗೆಯ ಸೌಲಭ್ಯಗಳನ್ನು ನೀಡುತ್ತಿದೆ. ಅಸಂಘಟಿತ ಕಾರ್ಮಿಕರು ಇಲಾಖೆಯಲ್ಲಿರುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಹಿರಿಯಶ್ರೇಣಿ ನ್ಯಾಯಾಧೀಶೆ ನಿವೇದಿತ ಮಹಂತೇಶ್ ಮಳಲಿಮಠ್ ಸಲಹೆ ನೀಡಿದರು.
ತಾಲ್ಲೂಕು ಕಾರ್ಮಿಕ ಇಲಾಖೆ, ಕಾನೂನು ಸೇವಾ ಸಮಿತಿ, ವಕೀಲರ ಸಂಘ ಶನಿವಾರ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರಿಗೆ ಇರುವ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಹಲವಾರು ಯೋಜನೆಗಳಿದ್ದು ಇವುಗಳು ಕಾರ್ಮಿಕರಿಗೆ ಉಪಯುಕ್ತವಾಗಿವೆ. ಈ ಬಗ್ಗೆ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಸೂಕ್ತ ದಾಖಲೆ ನೀಡಿ ನಿಮ್ಮ ಹೆಸರನ್ನು ನೊಂದಾಯಿಸಿಕೊಂಡು ಅನುಕೂಲ ಪಡೆದುಕೊಳ್ಳಿ ಎಂದರು.
ಕಾರ್ಮಿಕ ಇಲಾಖೆಯ ಅಧಿಕಾರಿ ಕಾವ್ಯ ಮಾತನಾಡಿ ಪಿಎಫ್ ಮತ್ತು ಇಎಸ್ಐ ಸೌಲಭ್ಯ ಇಲ್ಲದೆ ಕೆಲಸ ಮಾಡುವವರು ಅಸಂಘಟಿತ ಕಾರ್ಮಿಕರು ಎನಿಸಿಕೊಳ್ಳುತ್ತಾರೆ. ಇದರಲ್ಲಿ ಗೃಹ ಆದಾರಿತ ಕಾರ್ಮಿಕರು , ಬೀದಿ ಬದಿ ವ್ಯಾಪಾರಿಗಳು, ಬಿಸಿಊಟ ಸಿದ್ದಪಡಿಸುವವರು, ಹಮಾಲಿಗಳು, ಇಟ್ಟಿಗೆ ಬಟ್ಟಿ ಕಾರ್ಮಿಕರು , ಚಮ್ಮಾರರು, ಬಡಿಗಿಗಳು, ಅಗಸರು, ವಾಣಿಜ್ಯ ವಾಹನ ಓಡಿಸುವ ಚಾಲಕರು,ಕೈಮಗ್ಗ ಕಾರ್ಮಿಕರು , ಕ್ಷೌರಿಕರು ಸೇರಿದಂತೆ 29 ವೃತ್ತಿಯಲ್ಲಿ ಕೆಲಸ ಮಾಡುವವರನ್ನು ಅಸಂಘಟಿತ ಕಾರ್ಮಿಕರು ಎಂದು ಕರೆಯಲಾಗುತ್ತದೆ.
18ರಿಂದ 59 ವರ್ಷದೊಳಗಿನ ಕಾರ್ಮಿಕರಿಗೆ ವಿಮಾ ಸೌಲಭ್ಯ, ಚಿಕಿತ್ಸಾ ವೆಚ್ಚ ಸೌಲಭ್ಯಗಳು ದೊರೆಯುತ್ತದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಪಿಎಂ ಎಸ್.ವೈ.ಎಂ ಯೋಜನೆ ಅಡಿಯಲ್ಲಿ ಪ್ರತೀತಿಂಗಳೂ 3000 ಪೆನ್ಶೆನ್ ತೆಗೆದುಕೊಳ್ಳುವ ಯೋಜನೆ ಇದ್ದು ಈ ಯೋಜನೆ ಪಡೆದುಕೊಳ್ಳಲು ಪ್ರತೀ ತಿಂಗಳೂ ನಿಗಧಿತ ಶುಲ್ಕ ಪಾವತಿಸಬೇಕು ಎಂದು ವಿವರಿಸಿದರು.
ಕಾರ್ಮಿಕ ಇಲಾಖೆಯ ನಿರೀಕ್ಷಕ ರವಿ ಮಾತನಾಡಿ ಯಾವುದೇ ಸ್ಥಳದಲ್ಲಿ ಕಾರ್ಮಿಕರುರನ್ನು ನೇಮಿಸಿಕೊಂಡರೆ ನಿಗಧಿತ ಸಂಬಳ ನೀಡಬೇಕು. ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಳ್ಳಬಾರದು ಎಂದರು. ಕಾರ್ಮಿಕ ಇಲಾಖೆಯಲ್ಲಿ ಬಡವರ ಅನುಕೂಲಕ್ಕಾಗಿ ಅನೇಕ ಯೋಜನೆಗಳಿದ್ದು ಈ ಯೋಜನೆಗಳ ಬಗ್ಗೆ ನಮ್ಮ ಕಚೇರಿಗೆ ಬಂದು ಮಾಹಿತಿ ಪಡೆದು ದಾಖಲೆ ನೀಡಿ ನೊಂದಾಯಿಸಿಕೊಳ್ಳಿ ಎಂದರು.
ಅತ್ರಿ ಏಜೆನ್ಸಿ ಮಾಲೀಕ ಅತ್ರಿ ಪ್ರಭಾಕರ್ ವಿವಿಧ ಇಲಾಖೆಗಳಿಗೆ ಕೆಲಸಗಾರರನ್ನು ಒದಗಿಸುವ ಏಜೆನ್ಸಿ ನಡೆಸುತ್ತಿದ್ದಾರೆ. ಇವರು ತಮ್ಮ ಎಲ್ಲಾ ನೌಕರರಿಗೆ ಪ್ರತ್ಯೇಕವಾಗಿ ವಿಮೆ ಮಾಡಿಸಿ ತಮ್ಮ ಸಂಸ್ಥೆಯ ಕಾರ್ಮಿಕರಿಗೆ ವಿಮಾ ಸೌಲಭ್ಯ ಒದಗಿಸಿದ್ದಾರೆ. ಇಂತಹ ಮನೋಭಾವ ಎಲ್ಲ ಮಾಲೀಕರಲ್ಲೂ ಇದ್ದರೆ ಒಳ್ಳೆಯದು ಎಂದರು.
ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್ ಮಾತನಾಡಿದರು. ಅನಿಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಮಿಕ ಇಲಾಖೆಯ ಅಅನ್ನಪೂರ್ಣ,ಅಸಂಘಟಿತ ಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,
————————-ವಸಂತ್ ಕುಮಾರ್