ಹೊಳೆನರಸೀಪುರ:ಕರ್ನಾಟಕವನ್ನು ಮುಸ್ಲಿಂ ರಾಜ್ಯ ಮಾಡಲು ಸಂಚು-ಹಾಸನದ ರೈತರು ಪಹಣಿ ಪರೀಕ್ಷಿಸಿಕೊಳ್ಳುವಂತೆ ಬಿಜೆಪಿ ಸಲಹೆ-ಪ್ರತಿಭಟನೆಗೆ ನಿರ್ಧಾರ

ಹೊಳೆನರಸೀಪುರ:ಕರ್ನಾಟಕವನ್ನು ಮುಸ್ಲಿಂ ರಾಜ್ಯ ಮಾಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪಿತೂರಿ ನಡೆಸಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಆರೋಪ ಮಾಡಿದರು.

ಮಂಗಳವಾರ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಹಿಂದುಗಳೆಲ್ಲರೂ ತಲತಲಾಂತರದಿಂದ ಉಳುಮೆ ಮಾಡುತ್ತಿರುವ ಜಮೀನು ಹಾಗು ಮಠ,ಮಂದಿರಗಳ ಆಸ್ತಿಯ ಪಹಣಿಯ ಮೇಲೆ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಿ ಮುಸ್ಲಿಂ ಸಮುದಾಯಕ್ಕೆ ಸಹಾಯ ಮಾಡಿ ಕರ್ನಾಟಕವನ್ನು ಮುಸ್ಲಿಂ ರಾಜ್ಯ ಮಾಡಲು ಸಂಚು ರೂಪಿಸಲಾಗುತ್ತಿದೆ.

ಹಾಸನ ಜಿಲ್ಲೆಯ ಪ್ರತೀ ರೈತರು ತಮ್ಮ ಜಮೀನಿನ ಪಹಣಿಗಳನ್ನು ಗಮನಿಸಿಕೊಳ್ಳಿ. ಅದರಲ್ಲಿ ವಕ್ಫ್ ಆಸ್ತಿಯೆಂದು ಕಾಲಂ 9ರಲ್ಲಿ ನಮೂದಿಸುವ ಸಾದ್ಯತೆ ಹೆಚ್ಚಿದೆ. ಈ ರೀತಿಯ ಸಮಸ್ಯೆ ಕಂಡುಬಂದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಸದಸ್ಯರನ್ನು ಸಂಪರ್ಕಿಸಿ. ಬಿಜೆಪಿ ನಿಮ್ಮ ಪರವಾಗಿ ನಿಂತು ನಿಮ್ಮ ಪರಹೋರಾಟ ಮಾಡಿ ನಿಮ್ಮ ಜಮೀನನ್ನು ನಿಮಗೇ ಉಳಿಸಿಕೊಡುತ್ತದೆ. ಈ ಕ್ರಮವನ್ನು ವಿರೋಧಿಸಲು ನವಂಬರ್ 7 ಕ್ಕೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.

ಬಿಜೆಪಿ ಮಂಡಲ ನಿಕಟಪರ‍್ವ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ರಾಜ್ಯದಲ್ಲಿ ವಕ್ಫ್ ಬೋರ್ಡ್ ಸಚಿವ ಜಮೀರ್ ಅಹಮದ್ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ, ರೈತರ, ಪುರಾತತ್ವ ಇಲಾಖೆಯ ಆಸ್ತಿಯನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ. ರಾಜ್ಯದ ಐದಾರು ಜಿಲ್ಲೆಗಳಲ್ಲಿ ಈಗಾಗಲೇ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಸಮೂದಿಸಲಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಚಿವ ಜಮೀರ್ ಅಹಮದ್ ಅವರನ್ನು ಸಚಿವ ಸಂಪುಟದಿಂದ ಉಚ್ಛಾಟಿಸಬೇಕು. ಜಮೀರ್ ಅಹಮದ್ ಖಾನ್ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಸರಕಾರ ಕೂಡಲೆ ರೈತರ, ಮಠ, ಮಂದಿರಗಳ ಪಹಣಿಯಲ್ಲಿರುವ ವಕ್ಫ್ ಬೋರ್ಡ್ ಎನ್ನುವ ಪದವನ್ನು ತೆಗೆಯಬೇಕೆಂದು ಆಗ್ರಹಿಸಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಮಾತನಾಡಿ ರಾಜ್ಯದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸುವ ಸಲುವಾಗಿ ನವೆಂಬರ್ 7ರ ಗುರುವಾರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಎತ್ತಿನಗಾಡಿಯೊಂದಿಗೆ ಪ್ರತಿಭಟನಾ ಮೆರವಣಿಗೆ, ಶ್ರೀ ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ , ನಾಗರೀಕರಿಗೆ ಶೋಷಣೆಯ ಅರಿವು ಮೂಡಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸುತ್ತೇವೆ ಎಂದರು.

ಬಿಜೆಪಿಯ ಮಂಡಲ ಪ್ರಧಾನ ಕಾರ್ಯದರ್ಶಿ ಮೋಹನ್, ವಿದ್ಯಾಪ್ರಸಾದ್, ಮುಖಂಡರಾದ ಯೋಗಾನರಸಿಂಹ, ಯೋಗೇಶ್, ದೇವರಾಜು, ಅಭಿಷೇಕ್, ಶ್ರೀನಿವಾಸ್ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿದ್ದರು.

————-ವಸಂತ್ ಕುಮಾರ್

Leave a Reply

Your email address will not be published. Required fields are marked *

× How can I help you?