ಹೊಳೆನರಸೀಪುರ:ಕನ್ನಡ ಸಾಹಿತ್ಯ ಲೋಕಕ್ಕೆ ಶ್ರೀಮಂತಿಗೆ,ಧೀಮಂತಿಗೆ,ಗೌರವ ಘನತೆ ತಂದು ಕೊಟ್ಟ ಕುವೆಂಪು ಅವರ ಬರಹಗಳು ನಮ್ಮ ನಾಡಿದ ಬಹುದೊಡ್ಡ ಗ್ರಂಥಗಳು ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಮಂಜುರಾಜ್ ಬಣ್ಣಿಸಿದರು.
ಪಟ್ಟಣದ ಮಹಾತ್ಮಗಾಂಧಿ ಉದ್ಯಾನವನದಲ್ಲಿ ವಿಶ್ವಮಾನವ ಬಂಧುತ್ವ ವೇದಿಕೆ ಗುರುವಾರ ರಾತ್ರಿ ಆಯೋಜಿಸಿದ್ದ ಡಾ.ಕುವೆಂಪು ಜನ್ಮದಿನಾಚರಣೆಯಲ್ಲಿ ಮಾತನಾಡಿ, ಕುವೆಂಪು ಅವರು ವ್ಯಕ್ತಿ ಪೂಜೆಗಿಂತ ತತ್ವ ಪೂಜೆಗೆ ಒತ್ತು ನೀಡಿ, ಸಾಮಾಜಿಕ ಮೌಡ್ಯದ ವಿರುದ್ದ ಜಾಗೃತಿ ಮೂಡಿಸಿದರು.ಸನಾತನ ಪಟ್ಟಭದ್ರ ಹಿತಾಸಕ್ತಿಗಳ ಮನೋಧರ್ಮವನ್ನು ಕಂಡು ರೋಸಿಹೋಗಿದ್ದ ಅವರು ಮನನೊಂದು ನನ್ನ ಪುಸ್ತಕಗಳನ್ನು ಓದಲೇ ಬೇಡಿ ಎಂದಿದ್ದರು. ಅವರ ಅಷ್ಟೂ ಸಾಹಿತ್ಯದಲ್ಲಿ ಸಾಮಾಜಿಕ ಮೌಲ್ಯಗಳನ್ನು ತುಂಬಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿ ಕುವೆಂಪು ವಿಶ್ವಕ್ಕೆ ನೀಡಿದ ಬಹುದೊಡ್ಡಕೊಡುಗೆ. ಕುವೆಂಪು ಸೊಗಸಾದ ಸಾಹಿತ್ಯಕಾರ, ನಿಖರ ಆಡಳಿತಗಾರನಾಗಿದ್ದರು. ಅವರು ‘ಯಮನ ಸೋಲು’ ಎಂಬ ನಾಟಕದಲ್ಲಿ ಸ್ವಯಂ ಅಭಿನಯಿಸಿ ಉತ್ತಮ ನಟ ಎಂದು ಸಾಬೀತು ಪಡಿಸಿದ್ದರು. ಕುವೆಂಪು ಅವರೇ ರಚಿಸಿದ ಒಂದು ಪದ್ಯ ಅವರ ಕಾಲೇಜು ದಿನದಲ್ಲಿ ಅವರಿಗೇ ಪಠ್ಯವಾಗಿ ಬಂದಿತ್ತು. ಅವರೇ ಬರೆದ ಪದ್ಯಕ್ಕೆ ಅವರೇ ಉತ್ತರಿಸಬೇಕಾದ ಅವಕಾಶ ಪಡೆದುಕೊಂದ ಕನ್ನಡ ನಾಡಿನ ಮಹಾನ್ ಚೇತನ ಎಂದರು.
ಪ್ರಧಾನ ಗುರುದತ್, ಹಾ.ಮಾ.ನಾಯಕ, ಸಿ.ಪಿ.ಕೃಷ್ಣಕುಮಾರ್ ಸೇರಿದಂತೆ ಹಲವರು ಅವರ ಶಿಷ್ಯರು. ಶ್ರೀರಾಮಾಯಣ ದರ್ಶನಂ ಕೃತಿ ರಚಿಸಿ, ನೈಜ ರಾಮಾಯಣವನ್ನು ವಿಡಂಬನಾತ್ಮಕವಾಗಿ ತೆರೆದಿಟ್ಟರು. ಈ ಕೃತಿಗೆ ಕುವೆಂಪು ಅವರಿಗೆ ಜ್ಞಾನಪೀಠ ಪುರಸ್ಕಾರ ದೊರೆಯಿತುಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸುಪ್ರೀತ್ ಪಾಸ್ವಾನ್ ಕುವೆಂಪು ಅವರ ರಚನೆಗಳನ್ನು ಓದಿ ಬದುಕು ಕಟ್ಟಿಕೊಂಡ ಸಾವಿರಾರು ಮಂದಿ ಕನ್ನಡ ನಾಡಿನಲ್ಲಿ ಇದ್ದಾರೆ. ಕುವೆಂಪು ಅವರ ಕೃತಿಗಳು ಕನ್ನಡ ನಾಡಿಸ ಗ್ರಂಥ ಎಂದರು.
ಬೈಚನಹಳ್ಳಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಕೆ.ಕುಮಾರಯ್ಯ ಮಾತನಾಡಿ, ಕುವೆಂಪು ಮೂಲತಹ ಇಂಗ್ಲೀಷ್ ಭಾಷೆಯಲ್ಲಿ ಬರೆಯುತ್ತಿದ್ದವರು ಅವರ ಆತ್ಮೀಯರನೇಕರ ಸಲಹೆ ಮೇರೆಗೆ ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಶಕ್ತಿ ನೀಡಿದರು ಎಂದು ಹೇಳಿದರು.
ರೋಪಾ ಮಂಜುನಾಥ್ ಉಪಸ್ಥಿತರಿದ್ದರು. ಅನುಪಮಾ ಅವರ ನಿರೂಪಣೆ ಶೈಲಿ ಕುವೆಂಪು ಅಭಿಮಾನಿಗಳ ಗಮನ ಸೆಳೆಯಿತು. ಪುರಸಭಾ ಸದಸ್ಯ ಎಚ್.ಕೆ. ಪ್ರಸನ್ನ ಸ್ವಾಗತಿಸಿದರು.
———–ಸುಕುಮಾರ್