ಹೊಳೆನರಸೀಪುರ:ಲಯಕ್ಕೆ ಮರಳಿದ ಹೆಚ್.ಡಿ ರೇವಣ್ಣ-ರೈತರ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ-ಧಕ್ಷತೆಯಿಂದ ಕಾರ್ಯನಿರ್ವ ಹಿಸುವಂತೆ ತಾಕೀತು

ಹೊಳೆನರಸೀಪುರ:ತಾಲ್ಲೂಕಿನ ಕೆಲವು ಗ್ರಾಮ ಲೆಕ್ಕಿಗರು ಎರಡು ಮೂರು ವರ್ಷಗಳಾದರೂ ಜಮೀನಿನ ಖಾತೆ ಮಾಡುತ್ತಿಲ್ಲ ಎಂದು ಹೇಳಿ ಹಳೇಕೋಟೆ ಹೋಬಳಿಯ ಮಾವಿನಕೆರೆ ಗ್ರಾಮದ ರೈತನನ್ನು ತೋರಿಸಿ ನೋಡಿ ಇವರು ಮೂರು ವರ್ಷದಿಂದ ಖಾತೆ ಮಾಡಿಸಿಕೊಳ್ಳಲು ಅಲೆದಾಡುತ್ತಿದ್ದಾರೆ ಎಂದು ರೈತನನ್ನು ಮಾಧ್ಯಮ ಪ್ರತಿನಿಧಿಗಳಿಗೆ ಶಾಸಕ ಹೆಚ್.ಡಿ ರೇವಣ್ಣ ಪರಿಚಯಿಸಿದ ಅಪರೂಪದ ಪ್ರಸಂಗಕ್ಕೆ ತಾಲೂಕು ಕಚೇರಿ ಸಾಕ್ಷಿಯಾಯಿತು.

ಎಂದಿನ ತಮ್ಮ ಲವಲವಿಕೆಗೆ ಮರಳಿದಂತೆ ಕಂಡ ಹೆಚ್.ಡಿ ರೇವಣ್ಣ ತಾಲ್ಲೂಕಿನ ಭೂದಾಖಲೆಗಳ ಗಣಕೀಕೃತ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿ ನಂತರ ತಾಲೂಕು ಕಚೇರಿಯಲ್ಲಿದ್ದ ರೈತರ,ಜನಸಾಮಾನ್ಯರೊಂದಿಗೆ ಕಷ್ಟ-ಸುಖಗಳ ಆಲಿಸಿದರು.

ತಾಲೂಕಿನ ಹಳೇಕೋಟೆ ಹೋಬಳಿಯ ಲಕ್ಷ್ಮೀಪುರ ಗ್ರಾಮದ ನಾಗರಾಜು,ಕವಿತಾ, ಜ್ಯೋತಿ ಇತರರು ನಮ್ಮ ಹಿಂದಿನ ಜಮೀನಿಗೆ ಓಡಾಡಲು ಬಹಳ ವರ್ಷಗಳಿಂದ ಕರಾಬು ಜಾಗ ಇದ್ದು ಅದನ್ನೇ ಬಳಸುತ್ತಿದ್ದೆವು. ಇತ್ತೀಚೆಗೆ ಲೋಕೇಶ್, ತಿಮ್ಮೆಗೌಡ ಇತರರು ಅವರ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಆ ಮನೆಗಳಿಗೆ ಓಡಾಡಲು ಕರಾಬು ಜಾಗ ಬಿಟ್ಟು ನಮ್ಮ ಜಮೀನಿನಲ್ಲಿದ್ದ ರಾಗಿ, ಜೋಳ ಮತ್ತು ತೆಂಗಿನ ಸಸಿಗಳನ್ನು ನಾಶ ಮಾಡಿ ಅಕ್ರಮವಾಗಿ ನಮ್ಮ ಜಮೀನಿನಲ್ಲಿ ರಸ್ತೆ ಮಾಡಿಕೊಂಡಿದ್ದಾರೆ. ಕೇಳಲು ಹೋದ ನಮ್ಮ ಮೇಲೆ ಹಲ್ಲೆ ಮಾಡಿ, ಮೊಬೈಲ್ ಕಿತ್ತುಕೊಂಡಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡಿದರೂ ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ಶಾಸಕರ ಮುಂದೆ ಅಳಲು ತೋಡಿಕೊಂಡರು.

ಇದರಿಂದ ತೀವ್ರ ಅಸಮಾಧಾನಗೊಂಡ ಶಾಸಕ ರೇವಣ್ಣ ಸ್ಥಳದಲ್ಲಿದ್ದ ಪತ್ರಕರ್ತರಿಗೆ ನೋಡಿ ನಮ್ಮ ಕಂದಾಯ ಇಲಾಖೆ ಹಾಗೂ ಪೊಲೀಸರ ಕಾರ್ಯವೈಖರಿ ಹೇಗಿದೆ ಎಂದು ಹೇಳಿ ಡಿ.ವೈ.ಎಸ್.ಪಿ ಶಾಲೂ ಹಾಗೂ ವೃತ್ತ ನಿರೀಕ್ಷಕ ಪ್ರದೀಪ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ನೋಡಿ ಇವರು ದೂರು ನೀಡಿದರು ಕ್ರಮ ತೆಗೆದುಕೊಳ್ಳದ ನಿಮ್ಮ ಪೊಲೀಸರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಿ. ಹೀಗಾದರೆ ಬಡವರ ಗತಿ ಏನು ಎಂದು ಖಾರವಾಗಿ ಪ್ರಶ್ನಿಸಿದರು.ತಹಶೀಲ್ದಾರ್ ಗೆ ಈ ಬಗ್ಗೆ ಕ್ರಮ ತೆಗೆದುಕೊಂಡು ನ್ಯಾಯ ಒದಗಿಸಿ ಎಂದು ತಾಕೀತು ಮಾಡಿದರು.

ತಾಲ್ಲೂಕಿನ ದೊಡ್ಡಕಾಡನೂರು ಸಮೀಪದ ಕೋರೆ ಹಾಗೂ ಕ್ರಷರ್ ಗಳಿಂದ ಪ್ರತೀ ದಿನ 20 ರಿಂದ 25 ಲಾರಿಗಳಲ್ಲಿ ಎಂ. ಸ್ಯಾಂಡ್ ಬೇರೆ ಬೇರೆ ಊರುಗಳಿಗೆ ಸಾಗಾಟ ಆಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಒಂದೆರಡು ಲಾರಿಗಳಿಗೆ ರಶೀತಿ ಹಾಕಿ ಉಳಿದಿದ್ದೆಲ್ಲವನ್ನು ಬಿಟ್ಟು ಹಣ ಮಾಡಿಕೊಳ್ಳುತ್ತಿದ್ದಾರೆ. ನೀವು ಪೊಲೀಸರು ಅಂತಹ ಲಾರಿಗಳನ್ನು ಹಿಡಿದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿ ಎಂದು ಶಾಸಕರು ಆದೇಶಿಸಿದರು.

ಒಟ್ಟಾರೆ ಹಲವಾರು ಗೊಂದಲಗಳ ಕಾರಣಕ್ಕೆ ಮಂಕಾಗಿದ್ದ ಹೆಚ್.ಡಿ ರೇವಣ್ಣನವರು ಇತ್ತೀಚಿನ ದಿನಗಳಲ್ಲಿ ತಮ್ಮ ಹಳೆಯ ಲಯಕ್ಕೆ ಮರಳುತ್ತಿದ್ದು,ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸತೊಡಗಿರುವುದು ಉತ್ತಮ ಬೆಳವಣಿಗೆಯಂತೆ ಕಾಣುತ್ತಿದೆ.

ತಾಲೂಕು ಕಚೇರಿಯ ಎಲ್ಲಾ ದಾಖಲೆಗಳನ್ನು ಗಣಕೀಕೃತಮಾಡಲು ಕನಿಷ್ಟ 2 ವರ್ಷಗಳಾದರೂ ಬೇಕಾಗುತ್ತದೆ ಎಂದು ಶಿರಸ್ಥೇದಾರ್ ಲೋಕೇಶ್ ವಿವರಿಸಿದರು.

ಪ್ರಭಾರ ತಹಶೀಲ್ದಾರ್ ರಮೇಶ್, ಶಿರಸ್ಢೇದಾರ್ ಲೋಕೋಶ್, ಕಂದಾಯ ಇಲಾಖೆಯ ಹರೀಶ್ ಬಣಕಾರ್,ಪ್ರಥ್ವಿ ಇದ್ದರು.

———-ಸುಕುಮಾರ್

Leave a Reply

Your email address will not be published. Required fields are marked *

× How can I help you?