ಹೊಳೆನರಸೀಪುರ:ದೇಶದ ರೈತರ ಕಷ್ಟಗಳಿಗೆ ಯಾವ ರಾಜಕಾರಣಿಯೂ ಶಾಶ್ವತ ಪರಿಹಾರ ಕಂಡುಹಿಡಿದು ರೈತರ ಆತ್ಮಹತ್ಯೆ ತಪ್ಪಿಸಲು ಸಾಧ್ಯ ಆಗಲಿಲ್ಲ. ಮಣ್ಣಿನ ಮಗ ದೇವೇಗೌಡರು ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿಯೂ ರೈತರಿಗೆ ಸಹಾಯಮಾಡಲಿಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನ ಈಡಿಗನ ಹೊಸೂರು ಗ್ರಾಮದಲ್ಲಿ ಗುರುವಾರ ರೈತ ಸಂಘ ಹಾಗೂ ಸಂಘದ ನಾಮಫಲಕ ಉದ್ಘಾಟಿಸಿ ಮಾತನಾಡಿ, ಹಿಂದಿನ ವರ್ಷದ ಬರಗಾಲದಲ್ಲಿ 18 ಸಾವಿರ ಕೋಟಿ ಬೆಳೆ ನಷ್ಟುಉಂಟಾಗಿತ್ತು. ಇಷ್ಟು ನಷ್ಕಕೆ ಕೇಂದ್ರ ಸರಕಾರ 400 ಕೋಟಿ, ರಾಜ್ಯ ಸರಕಾರ 200 ಕೋಟಿ ಪರಿಹಾರ ನೀಡಿ ಸುಮ್ಮನೆ ಕುಳಿತವು.
ಯಾವ ನಾಯಕರೂ ಸಂಪೂರ್ಣ ನಷ್ಟವನ್ನು ರೈತರಿಗೆ ಕೊಡಿಸಲಿಲ್ಲ. ಸಾಲ ಮಾಡಿಕೊಂಡಿದ್ದ ರೈತರ ಆತ್ಮಹ್ಯತೆಯನ್ನೂ ತಪ್ಪಿಸಲಿಲ್ಲ. ಕೇಂದ್ರ ಸರಕಾರ ಶ್ರೀಮಂತ ಉಧ್ಯಮಿಗಳ 9.90 ಲಕ್ಷ ಕೋಟಿ ಸಾಲ ಹಾಗೂ ತೆರಿಗೆಯನ್ನು ಮನ್ನಾ ಮಾಡಿದೆ. ಇಷ್ಟು ಹಣದಲ್ಲಿ ದೇಶದ ಎಲ್ಲಾ ರೈತರ ಸಾಲಮನ್ನಾಮಾಡಬಹುದಿತ್ತು ಆದರೆ ಮಾಡಲಿಲ್ಲ. ಯಾವುದೇ ಸರಕಾರ ಬಂದರೂ ರೈತರಿಗೆ ಸಹಾಯ ಮಾಡಲ್ಲ. ಆದ್ದರಿಂದ ರೈತರೇ ಸರಕಾರ ನಡೆಸುವಂತೆ ರೈತರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ರೈತರು ಹಣ ಹೆಂಡಕ್ಕೆ ತಮ್ಮ ಪವಿತ್ರವಾದ ಮತವನ್ನು ಮಾರಿಕೊಳ್ಳದೆ, ರೈತ ಸಂಘದಿಂದ ಯಾರೇ ಸ್ಪರ್ದಿಸಿದರು ಅವರಿಗೇ ಮತಹಾಕಿ ಅಧಿಕಾರದ ಚುಕ್ಕಾಣಿ ಹಿಡಿದರೆ ಮಾತ್ರ ರೈತರು ಉತ್ತಮ ಬದುಕನ್ನು ಕಾಣಬಹುದು.
ದೇಶದಲ್ಲಿ ಶಿಕ್ಷಣ, ಆರೋಗ್ಯ, ಪ್ರಯಾಣ, ಜೀವನ ನಿರ್ವಹಣೆ ದುಬಾರಿ ಆಗಿದೆ. ಆದರೆ ದೇಶದ ಜನರಿಗೆ ಅನ್ನ, ಹಾಲು, ತರಕಾರಿ ನೀಡುವ ರೈತರ ಬದುಕು ಕನಿಷ್ಟವಾಗುತ್ತಿದೆ. ರೈತರ ಆತ್ಮಹತ್ಯೆಗೆ ಕಾರಣ ಹುಡುಕಲು ಸರಕಾರ ಸ್ವಾಮಿನಾಥನ್ ಸಮಿತಿ ರಚಿಸಿತು. ಆ ಸಮಿತಿ ರೈತರ ಆತ್ಮಹತ್ಯೆಗೆ, ರೈತರ ಆರ್ಥಿಕ ದಿವಾಳಿತನ ಕಾರಣ ಆಗಿದೆ ಎಂದು ವರದಿ ನೀಡಿ 23 ವರ್ಷಗಳು ಕಳೆದರೂ ವರದಿಯಲ್ಲಿನ ಶಿಫಾರಸ್ಸನ್ನು ಜಾರಿ ಮಾಡಿ ರೈತರ ಆತ್ಮಹತ್ಯೆಯನ್ನು ತಡೆಯಲಿಲ್ಲ ಎಂದು ಆಕ್ರೋಶ ಹೊರಹಾಕಿದರು.
ರೈತರು ಭೂಮಿಯನ್ನು ಮಾರಾಟಮಾಡುವಂತಿಲ್ಲ ಎಂದು 61 ರ ಕಾಯ್ದೆ ಹೇಳುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಭೂ ಸುಧಾರಣ ಕಾಯ್ದೆ ಜಾರಿಗೆ ತಂದು ರೈತರ ಭೂಮಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ನಂತರ 10 ಲಕ್ಷ ರೈತರು ಭೂಮಿಯನ್ನು ಶ್ರೀಮಂತರಿಗೆ ಮಾರಾಟ ಮಾಡಿ ಬೀದಿಗೆ ಬಿದ್ದಿದ್ದಾರೆ.
ಈ ಕಾಯ್ದೆಜಾರಿಗೆ ಬಂದಾಗ ಇದನ್ನು ವಿರೋಧಿಸಿ ತಿದ್ದುಪಡಿ ಮಾಡಲೇಬೇಕು ಮಾಡುತ್ತೇನೆ ಎಂದು ಹೇಳಿ ನಮ್ಮೆಲ್ಲರ ಹಾಗೂ ರಾಜ್ಯದ ರೈತರ ಬೆಂಬಲ ಪಡೆದು ಗೆದ್ದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಇಂದು ಮೌನವಾಗಿದಾರೆ ಎಂದು ದೂರಿದರು.
ರಾಜ್ಯ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಬಾಬು, ತಾಲ್ಲೂಕು ಅಧ್ಯಕ್ಷ ಜವರೇಶ್, ರಾಜ್ಯ ಮಹಿಳಾ ಸಂಚಾಲಕಿ ಕಮಲಮ್ಮ, ಜಿಲ್ಲಾ ಕಾರ್ಯದರ್ಶಿ ಪವಿತ್ರಾ, ಗ್ರಾಮದ ಮುಖಂಡರಾದ ದೇವರಾಜ್, ರವಿಶಂಕರ್, ಕುಳ್ಳೇಗೌಡ ಚಂದ್ರಶೇಖರ್, ಹೇಮಂತ್ ಇತರರು ಭಾಗವಹಿಸಿದ್ದರು .
——————–-ವಸಂತ್ ಕುಮಾರ್