ಹೊಳೆನರಸೀಪುರ:ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳ ಗಳಿಕೆಯ ಜೊತೆಗೆ ವೃತ್ತಿ ಕೌಶಲ್ಯ ತರಬೇತಿ ಅವಶ್ಯ-ವಿದ್ಯಾರ್ಥಿಗಳಿಗೆ ಫಯಾಜ್ ಫಾಷ ಸಲಹೆ

ಹೊಳೆನರಸೀಪುರ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಕೆಲಸ ಗಿಟ್ಟಿಸಿಕೊಂಡು ಬೆಳೆಯಬೇಕೆಂದರೆ ನಮಗೆ ಒಳ್ಳೆಯ ಅಂಕಗಳಷ್ಟೇ ಸಾಕಾಗುವುದಿಲ್ಲ.ನಾವು ಗಳಿಸಿದ ಅಂಕಗಳ ಜೊತೆಗೆ ನಮಗೆ ವೃತ್ತಿ ಕೌಶಲ್ಯ ಇದ್ದರೆ ಸಮಾಜದಲ್ಲಿ ಒಳ್ಳೆಯ ಹೆಸರು, ಕೀರ್ತಿ ಜೊತೆಗೆ ಹಣವನ್ನೂ ಗಳಿಸಬಹುದು ಎಂದು ಪಡವಲಹಿಪ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಯಾಜ್ ಫಾಷ ತಿಳಿಸಿದರು.

ಪಡವಲಹಿಪ್ಪೆ ಎಚ್.ಡಿ. ದೇವೇಗೌಡ ಸರಕಾರಿ ಪ್ರಥಮ ದರ್ಜೆ ಸರಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಹದಿನೈದು ದಿನಗಳ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಸರಕಾರಿ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವುದು ಅಪರೂಪ. ಈ ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಆಯೋಜಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬದುಕಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿರುವುದು ಸಂತಸದ ಸಂಗತಿ ಎಂದರು.

ಪ್ರತಿ ವರ್ಷ ಭಾರತದಲ್ಲಿ 85 ಲಕ್ಷ ವಿದ್ಯಾರ್ಥಿಗಳು ಪದವಿ ನಂತರ ಕೌಶಲ್ಯಗಳನ್ನು ಪಡೆಯಲು ಖಾಸಗಿ ತರಭೇತಿ ಸಂಸ್ಥೆಗಳಿಗೆ ಸೇರಿ ಲಕ್ಷಾಂತರ ರೂ ಶುಲ್ಕ ಕಟ್ಟಿ ಕಲಿಯುತ್ತಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದು ದುಬಾರಿಯಾಗುತ್ತದೆ. ಇದನ್ನರಿತ ಹೆಚ್.ಡಿ. ದೇವೇಗೌಡ ಪದವಿ ಕಾಲೇಜಿನಲ್ಲಿ ಇಂತಹ ತರಬೇತಿ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಪ್ರಾಂಶುಪಾಲ ಕೆ.ಸಿ. ವಿಶ್ವನಾಥ್, ವಿದ್ಯಾರ್ಥಿಗಳು ಪದವಿ ಪಡೆಯುವುದು ಮುಖ್ಯವಲ್ಲ. ಆ ಪದವಿಯನ್ನು ಹೇಗೆ ಪಡೆಯುತ್ತಿದ್ದೇನೆ ಎನ್ನುವುದು ಮುಖ್ಯ. ಪದವಿ ಪಡೆದು ಹೊರಗೆ ಹೋಗುವ ಪ್ರತಿಯೊಬ್ಬ ವಿದ್ಯಾರ್ಥಿಗೆ ನಾವು ಉದ್ಯೋಗ ಗಳಿಸಿಕೊಳ್ಳಬಲ್ಲೇ ಎನಿಸಿದರೆ ಆಗ ನಿಜವಾಗಿಯೂ ಆ ಶಿಕ್ಷಣಕ್ಕೆ ಹಾಗೂ ಶಿಕ್ಷಣ ನೀಡಿದ ಸಂಸ್ಥೆಗೆ ಗೌರವ ದೊರೆತಂತಾಗುತ್ತದೆ, ನಮ್ಮ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಆಯೋಜಿಸುತ್ತಿದ್ದ ಸರ್ಟಿಫಿಕೇಟ್ ಕೋರ್ಸ್ ತರಬೇತಿಯನ್ನು ಎಲ್ಲ ಅಧ್ಯಾಪಕರ ಸಲಹೆಯ ಮೇರೆಗೆ ಪದವಿ ವಿದ್ಯಾರ್ಥಿಗಳಿಗೂ ಆಯೋಜಿಸಲು ತೀರ್ಮಾನಿಸಿದ್ದೇವೆ . ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದು ಇವರಿಗೂ ಕಾರ್ಪೊರೇಟ್ ಕ್ಷೇತ್ರದಲ್ಲಿ ದುಡಿಯಬೇಕು ಎಂಬ ಮನಸ್ಸಿದ್ದರೂ ಕೌಶಲ್ಯಗಳ ಕೊರತೆ ಇರುವುದನ್ನು ಗಮನಿಸಿದ ನಾವು ನಾವು ಈ ತರಬೇತಿ ಕಾರ್ಯಕ್ರಮವನ್ನು ರೂಪಿಸಿದ್ದೇವೆ ಎಂದು ತಿಳಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಉದ್ಯೋಗ ಮೇಳವನ್ನು ಆಯೋಜಿಸುತ್ತೇವೆ. ತರಬೇತಿಯಲ್ಲಿ ಆಸಕ್ತಿಯಿಂದ ಕಲಿತು ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಪದವಿ ಪೂರ್ವ ಕಾಲೇಜಿನ ಮಾದೇಶ್, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಲೋಹಿತ್ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಕೆ. ಭುವನೇಂದ್ರ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪಿ.ಆರ್. ಶಿವಕುಮಾರ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮಹೇಶ್, ಧರ್ಮೋಜಿರಾವ್, ಪ್ರಹ್ಲಾದ್ ಹಾಗೂ ತರಬೇತುದಾರರಾದ ವಿಶ್ವನಾಥ್ ಭಾಗವಹಿಸಿದ್ದರು.

———–——-ಸುಕುಮಾರ್

Leave a Reply

Your email address will not be published. Required fields are marked *

× How can I help you?