ಹೊಳೆನರಸೀಪುರ:ಬಲಾಢ್ಯರಾದವರು ಮೀಸಲಾತಿಯಿಂದ ಹೊರ ನಡೆಯಬೇಕು-ಶೋಷಿತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಿತ್ತುಕೊ ಳ್ಳುತ್ತಿದ್ದಾರೆ-ಎಂ.ವಿ. ಶಿವಕುಮಾರ್

ಹೊಳೆನರಸೀಪುರ:ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತಕ್ಕೆ ಸ್ವಾತಂತ್ರ್ಯ, ಸಮಾನತೆ, ಭಾತೃತ್ವವನ್ನು ನಮ್ಮ ಸಂವಿಧಾನ ನೀಡಿದೆ. ಇದರ ಜೊತೆಗೇ ನಮಗೆ ಹಕ್ಕು ಮತ್ತು ಸ್ವಾತಂತ್ರ್ಯವನ್ನೂ ನೀಡಿದೆ. ಸಂವಿಧಾನ ನಮಗೆ ನೀಡಿರುವ ಸ್ವಾತಂತ್ರ್ಯವನ್ನು ಸ್ವೇಚ್ಚಾಚಾರಕ್ಕೆ ಬಳಸಬಾರದು ಎನ್ನುವ ಕಾರಣಕ್ಕೆ ಕೆಲವು ಸಂದರ್ಭ ಮತ್ತು ಸಮಯದಲ್ಲಿ ಕೆಲವು ನಿಭಂದನೆಗಳನ್ನೂ ವಿಧಿಸಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ನಿವೇದಿತಾ ಮಹಂತೇಶ್ ವಿವರಿಸಿದರು.

ಸರ್ಕಾರೀ ಕಾನೂನು ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ 14 ನೇ ಶತಮಾನದಲ್ಲಿ ಬಸವಣ್ಣನವರೂ ಸಮಾನತೆಯ ಸಂದೇಶ ಸಾರಿದ್ದರು.ಸಂವಿಧಾನವೂ ಸಮಾನತೆಯ ಹಕ್ಕನ್ನೂ ಎಲ್ಲರಿಗೂ ನೀಡಿದೆ ಎಂದರು.

ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲರನ್ನೂ ನಾನು ಇಂದು ನೆನಪಿಸಿಕೊಂಡು ಗೌರವಿಸಬೇಕು ಎಂದು ತಿಳಿಸಿದರು.

ನ್ಯಾಯಾಧೀಶೆ ಚೇತನಾ ಮಾತನಾಡಿ, ನಮ್ಮ ಸಂವಿಧಾನ ತಾರತಮ್ಯ ಇಲ್ಲದ ಜೀವನ ನಡೆಸುವ ಹಕ್ಕನ್ನು ಪ್ರತಿಯೊಬ್ಬರಿಗೂ ನೀಡಿದೆ. ನಮ್ಮ ಹಕ್ಕಿಗೆ ಚ್ಯುತಿ ಬಂದಾಗ ಹೋರಾಡುವ ನಾವು ನಮ್ಮ ಕರ್ತವ್ಯವನ್ನೂ ಮರೆಯಬಾರದು. ನೆಲ, ಜಲ, ಪರಿಸರದ ರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎಂದು ನಮ್ಮ ಸಂವಿಧಾನ ಹೇಳಿದೆ. ಸಂವಿಧಾನ ರಚನೆ ಆಗಿದಿದ್ದಾಗಲೂ ಜನರು ಬದುಕಿದ್ದರು. ಆದರೆ ಸ್ವಾಂತಂತ್ರ್ಯ, ಸಮಾನತೆ ಇರಲಿಲ್ಲ. ಗುಲಾಮಗಿರಿ ಇತ್ತು.ಸಂವಿಧಾನ ನಮಗೆ ಸಮಾನತೆ ಜೊತೆಗೆ ಎಲ್ಲವನ್ನೂ ನೀಡಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಂ.ವಿ. ಶಿವಕುಮಾರ್ ನಮ್ಮ ಸಂವಿಧಾನ ನಮ್ಮನ್ನು ಸತ್ಪ್ರಜೆಗಳಾಗಲು ಮಾರ್ಗದರ್ಶನ ನೀಡಿದೆ. ಆದರೆ ನಾವು ಅನ್ಯಾಯಗಳನ್ನೂ ನೋಡಿಯೂ ಖಂಡಿಸದಂತಹ ಸತ್ತ ಪ್ರಜೆಗಳಾಗಿದ್ದೇವೆ. ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನತೆ ಇರಲಿ ಎನ್ನುವ ಉದ್ದೇಶದಿಂದ ಮೀಸಲಾತಿ ತಂದರು.ಮೀಸಲಾತಿ ಪಡೆದವರು ಉತ್ತಮ ಸ್ಥಿತಿಗೆ ಬಂದರೂ ಇನ್ನೂ ಮೀಸಲಾತಿ ಸೌಲಭ್ಯ ಪಡೆದು ಬಡವರಿಗೆ, ಶೋಷಿತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಇಂತಹ ಮನೋಭಾವ ಬದಲಾಗಬೇಕು ಎಂದು ಆಶಿಸಿದರು.

ವಕೀಲರಾದ ಶ್ರೀನಿವಾಸ್ ಕಾನೂನಿನ ವಿವಿಧ ಕಲಂಗಳ ಬಗ್ಗೆ ವಿವರಿಸಿದರು.ಪ್ರಾಂಶುಪಾಲೆ ಭಾಗ್ಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕಿ ಗೀತಾ ಉಪಸ್ಥಿತರಿದ್ದರು. ಐಶ್ವರ್ಯ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಹ ಪ್ರಾಧ್ಯಾಪಕ ಹರೀಶ್ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಸಹಪ್ರಾಧ್ಯಾಪಕರಾದ ಮಾಲ್ತೇಶ್ ಸ್ವಾಗತಿಸಿದರು. ಸೋಮಶೇಖರ್ ವಂದಿಸಿದರು.

————————-ವಸಂತ್ ಕುಮಾರ್

Leave a Reply

Your email address will not be published. Required fields are marked *

× How can I help you?