
ಹೊಳೆನರಸೀಪುರ:ಕಾನೂನಿನ ಮುಂದೆ ಎಲ್ಲರೂ ಸಮಾನರು.ಕಾನೂನು ಎಲ್ಲರಿಗೂ ಒಂದೇ.ಯಾವುದೇ ಪ್ರಕರಣ ನಡೆದಾಗ ಪ್ರಕರಣದ ತೀವ್ರತೆ ಹಾಗೂ ಸ್ಥಳೀಯವಾಗಿ ಸಿಕ್ಕ ಸಾಕ್ಷಿಗಳ ಆದಾರದಲ್ಲಿ ನಾವು ನಿಯಮದಂತೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಬಿ.ಆರ್.ಪ್ರದೀಪ್ ಕುಮಾರ್ ಸ್ಪಷ್ಟಪಡಿಸಿದರು.
ಶುಕ್ರವಾರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ ಕೆಲವು ಸಿಬ್ಬಂದಿಗಳು ನಿಮ್ಮ ದೂರನ್ನು ದಾಖಲಿಸಿಕೊಳ್ಳದಿದ್ದಾಗ ನಮ್ಮ ಗಮನಕ್ಕೆ ತನ್ನಿ ಖಂಡಿತ ನಾವು ನೊಂದವರಿಗೆ ನ್ಯಾಯ ಒದಗಿಸುತ್ತೇವೆ. ನಾನಾಗಲಿ ನಮ್ಮ ಡಿವೈಎಸ್ಪಿ ಮೇಡಂ ಆಗಲಿ ಎಲ್ಲರನ್ನೂ ಸಮಾನವಾಗಿ ಗೌರವಿಸಿ ನಿಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹರಿಸಿದ್ದೇವೆ. ಅನಿವಾರ್ಯ ಸಂಬಂರ್ಧದಲ್ಲಿ ಕಾನೂನು ರೀತಿ ಕ್ರಮವನ್ನೂ ತೆಗೆದುಕೊಂಡಿದ್ದೇವೆ. ನಿಮ್ಮ ಅನೇಕ ಮುಖಂಡರು ನಮ್ಮ ಗಮನಕ್ಕೆ ತಂದ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ನ್ಯಾಯ ಒದಗಿಸಿದ್ದೇವೆ ಎಂದರು.
ಡಿ.ವೈ.ಎಸ್.ಪಿ. ಶಾಲೂ ಮಾತನಾಡಿ, ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಮೊನ್ನೆ ಡಾಬಾದಲ್ಲಿ ನಡೆದ ಘಟನೆಯಲ್ಲಿ ಡಾಬಾ ಮಾಲೀಕನ ಮೇಲೆ ಆಯುಧದಿಂದ ಹಲ್ಲೆ ನಡೆದಿದೆ. ಡಾಬಾ ಮಾಲೀಕ ಬೈದ ಎಂದಾಗ ಆತನ ಮೇಲೆ ಹಲ್ಲೆ ಮಾಡುವ ಬದಲು ನಮಗೆ ಕರೆ ಮಾಡಿದ್ದರೆ ನಾವು ತಕ್ಷಣ ಸ್ಥಳಕ್ಕೆ ಬಂದು ಕ್ರಮ ತೆಗದುಕೊಳ್ಳುತ್ತಿದ್ದೆವು. ನಾವು ಯಾವುದೇ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ ಕೂಲಂಕುಷವಾಗಿ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ನಿಮಗೆ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ಬಡಾವಣೆಯ ರಾಘವೇಂದ್ರ ಮಾತನಾಡಿ, ನಮ್ಮ ಅಂಬೇಡ್ಕರ್ ನಗರದಲ್ಲಿ 50 ಜನರನ್ನು ರೌಡಿ ಶೀಟ್ ನಲ್ಲಿ ಸೇರಿಸಿದ್ದಾರೆ ಎಂದಾಗ, ಡಿವೈಎಸ್ಪಿ ಶಾಲೂ 50 ಜನರು ರೌಡಿಶೀಟ್ನಲ್ಲಿಲ್ಲ. 12 ಜನರು ರೌಡಿಶೀಟ್ನಲ್ಲಿದ್ದಾರೆ ಅದರಲ್ಲಿ ಒಬ್ಬರನ್ನು ಕೈ ಬಿಟ್ಟಿದ್ದೇವೆ ಎಂದರು.ಎಲ್ಲರನ್ನೂ ಕೈ ಬಿಡಿ ಎಂದಾಗ ಉತ್ತರಿಸಿದ ವೃತ್ತನಿರೀಕ್ಷಕ ಪ್ರದೀಪ್ ನಮ್ಮ ಮನ ಬಂದಂತೆ ರೌಡಿ ಶೀಟ್ ತೆಗೆಯುವುದಕ್ಕೆ ಅಥವಾ ಕೈ ಬಿಡುವುದಕ್ಕೆ ಆಗುವುದಿಲ್ಲ. ಇಂತಿಷ್ಟು ಪ್ರಕರಣಗಳಲ್ಲಿ ಭಾಗಿ ಆಗಿದ್ದರೆ ರೌಡಿ ಶೀಟರ್ ತೆಗೆಯಬೇಕೆಂಬ ನಿಯಮ ಇದೆ. ನಂತರ 10 ವರ್ಷ ಆತ ಯಾವುದೇ ಪ್ರಕರಣಗಳಲ್ಲಿ ಭಾಗಿ ಆಗಿಲ್ಲ ಎಂದರೆ ಅತಂಹವರನ್ನು ಕೈ ಬಿಡಲೇ ಬೇಕೆಂದೂ ನಿಯಮ ಇದೆ. ನಾವು ಅಂತಹವರನ್ನು ಕೈ ಬಿಟ್ಟಿದ್ದೇವೆ ಎಂದರು.
ಎಚ್.ಟಿ. ಲಕ್ಷ್ಮಣ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ವೈ. ಚಂದ್ರಶೇಖರ್, ವಕೀಲ ಎಚ್.ಆರ್. ಮಂಜುನಾಥ್, ಮುತ್ತುರಾಜ್, ತಾರೇಶ್, ಜವರೇಶ್, ಸುಪ್ರೀತ್ಪಾಸ್ವಾನ್,ವಸಂತಕುಮಾರ್,ಪುನೀತ್,ಅವರುಗಳು ಮಾತನಾಡಿ ನಮ್ಮ ಬಡಾವಣೆಯಲ್ಲಿ ಅಕ್ರಮ ಮಧ್ಯ ಮಾರಾಟ, ಪಟ್ಟಣದಲ್ಲಿ ಗಾಂಜಾ ಮಾರಾಟ ಹೆಚ್ಚಾಗಿದೆ.ಕೆಲವರು ಅಂಬೇಡ್ಕರ್ ನಗರದವರೆಲ್ಲರೂ ಕೆಟ್ಟವರು ಎಂದು ಬಿಂಬಿಸುತ್ತಿದ್ದಾರೆ. ಇದನ್ನು ಪೊಲೀಸರು ಪೂರ್ವಗ್ರಹವಾಗಿಸಿಕೊಳ್ಳಬಾರದು. ನಮ್ಮಲ್ಲಿ ಅನೇಕರು ಜೀವನ ನಿರ್ವಹಣೆಗಾಗಿ ಆಟೋ ಓಡಿಸುತ್ತಿದ್ದು ಅವರಿಗೆಲ್ಲಾ ಉಚಿತವಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಡಿ, ನಮ್ಮ ಬಡಾವಣೆಯ ರಸ್ತೆಗಳ ಮೇಲೆಲ್ಲಾ ಹುಲ್ಲು ಹಾಕುತ್ತಿದ್ದಾರೆ ಇದರಿಂದ ವಾಹನಗಳ ಓಡಾಟಕ್ಕೆ ತೀವ್ರತೊಂದರೆ ಆಗಿದೆ ತಪ್ಪಿಸಿ, ಪಟ್ಟಣದಲ್ಲಿ ಬೆಳಗಿನ ಜಾವದಿಂದಲೇ ಮಧ್ಯಮಾರಾಟ ಪ್ರಾರಂಭವಾಗುತ್ತಿದೆ ತಡೆಯಿರಿ. ಎಡಿ ಕಾಲೋನಿ ಸಮೀಪ ಹಾಗೂ ಚೆಸ್ಕಾಂ ಎದುರು ಸಿಸಿ ಕ್ಯಾಮರಾ ಅಳವಡಿಸಿ ಎಂದು ಮನವಿ ಮಾಡಿದರು.
——-—-ಸುಕುಮಾರ್