ಹೊಳೆನರಸೀಪುರ:ಪಟ್ಟಣದಲ್ಲಿ ದಿನೇ ದಿನೇ ಶಬ್ದಮಾಲಿನ್ಯ ಹೆಚ್ಚಾಗುತ್ತಿದ್ದು ಬ್ಯಾಂಕ್, ಅಂಗಡಿ, ಶಾಲೆಗಳಲ್ಲಿ ಹಾಗೂ ಇನ್ನಿತರ ಕಚೇರಿಗಳಿಗೆ ತೀವ್ರ ತೊಂದರೆ ಆಗುತ್ತಿದೆ.
ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಅಲ್ಲಲ್ಲಿ ನಿಂತು ಈರುಳ್ಳಿ, ಬೆಳ್ಳುಳ್ಳಿ, ಟಮೋಟ, ಹಣ್ಣುಗಳನ್ನು ಮಾರಾಟ ಮಾಡುವ ಗಾಡಿಗಳಲ್ಲಿ, ಗೂಡ್ಸ್ ಆಟೋಗಳಲ್ಲಿ ಧ್ವನಿವರ್ಧಕ ಅಳವಡಿಸಿಕೊಂಡು ಅದಕ್ಕೆ ರೆಕಾರ್ಡ್ ಮಾಡಿರುವ ಪೆನ್ ಡ್ರೈವ್ ಅಳವಡಿಸಿ, ಜೋರಾಗಿ ಸೌಂಡ್ ಕೊಟ್ಟುಕೊಂಡು ಬೆಳಿಗ್ಗೆಯಿಂದ ರಾತ್ರಿವರೆಗೂ ನಿಂತು ಮಾರಾಟ ಮಾಡುತ್ತಿರುವುದರಿಂದ ಸಾರ್ವಜನಿಕರು ಹಾಗೂ ಕಚೇರಿಗಳಲ್ಲಿ ಪರಸ್ಪರ ಮಾತನಾಡುವುದೂ ಕೇಳದಂತಾ ಗಿರುವುದಲ್ಲದೆ ಇಲ್ಲಿನ ಕೆಪಿಎಸ್ ಹಾಗೂ ಪಾರ್ಕ್ ಹಿಂಭಾಗದ ಕಾಲೇಜು ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಪಾಠ ಕೇಳಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದಲ್ಲದೆ ರಸ್ತೆಗಳಲ್ಲಿ ಅಲ್ಲಲ್ಲಿ ನಿಂತು ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಸಾರ್ವಜನಿಕರ ಹಾಗೂ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದೆ. ಪಟ್ಟಣದ ಸುಭಾಶ್ ವೃತ್ತ ಮತ್ತು ಗಾಂಧೀ ವೃತ್ತ, ಪೇಟೆ ಮುಖ್ಯರಸ್ತೆ ಹಾಗೂ ಪುರಸಭಾ ಕಚೇರಿಯ ಮುಂದೆ ಅತಿಹೆಚ್ಚಿನ ತಳ್ಳುಗಾಡಿಗಳು, ಗೂಡ್ಸ್ ಆಟೋಗಳಲ್ಲಿ ನಿಂತು ಮಾರಾಟ ಮಾಡುತ್ತಿದ್ದು ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದ್ದರೂ ಪೊಲೀಸರು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಗೃಹರಕ್ಷಕರು ರಸ್ತೆಗಳಲ್ಲಿ ನಿಂತಿರುತ್ತಾರಾದರೂ ಯಾವುದೇ ನಿಯಂತ್ರಣ ಮಾಡುತ್ತಿಲ್ಲ ಎಂದು ಅಂಗಡಿಗಳ ಮಾಲೀಕರು ದೂರಿದ್ದಾರೆ. ರಸ್ತೆ ಬದಿಗಳಲ್ಲೇ ಎಲ್ಲವನ್ನೂ ಗಾಡಿಗಳಲ್ಲಿ ಇಟ್ಟು ಮಾರಾಟ ಮಾಡುತ್ತಿರುವುದರಿಂದ ಮಾರುಕಟ್ಟೆ ಒಳಗೆ ಬಾಡಿಗೆ ನೀಡಿ ಅಂಗಡಿ ತರೆದಿರುವವರಿಗೆ ವ್ಯಾಪಾರ ಇಲ್ಲದೆ ಗೋಳಾಡುತ್ತಿದ್ದಾರೆ.
ರಸ್ತೆ ಬದಿ ವ್ಯಾಪಾರಿಗಳು ತಮ್ಮ ತಳ್ಳುಗಾಡಿಗಳನ್ನು, ಇಲ್ಲಿ ಸಾವಿರಾರು ರೂ ಬಾಡಿಗೆ ನೀಡಿ ಅಂಗಡಿ ನಡೆಸುತ್ತಿರುವ ಅಂಗಡಿಗಳ ಮುಂದೆ ನಿಲ್ಲಿಸುತ್ತಿದ್ದು ನಮ್ಮ ಅಂಗಡಿಗೆ ಜನರು ಬರಲಾಗಲ್ಲ ನಿಮ್ಮ ಗಾಡಿ ತೆಗೆಯಿರಿ ಎಂದು ಹೇಳಿದಾಗ ಕೆಲವೊಮ್ಮೆ ಪರಸ್ಪರ ಗಲಾಟೆಗಳಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಪೊಲೀಸರು ಕ್ರಮ ತೆಗೆದುಕೊಂಡು ಜನರಿಗೆ, ವಾಹನಗಳ ಮಾಲೀಕರಿಗೆ ಆಗುತ್ತಿರುವ ತೊಂದರೆ ಹಾಗೂ ಶಬ್ದ ಮಾಲಿನ್ಯ ತಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಕೆಲವಾರು ವರ್ಷಗಳ ಹಿಂದೆ ಅಂಗಡಿಯ ಮುಂದೆ ಹಲಸಿನತೋಳೆ ಮಾರಾಟ ಮಾಡುತ್ತಿದ್ದ ಗಾಡಿಯನ್ನು ತೆಗೆಯುವ ವಿಚಾರದಲ್ಲಿ ಗಲಾಟೆ ಆಗಿ ಚಾಕುವಿನಿಂದ ಇರಿದಿದ್ದ ಘಟನೆ ನಡೆದು ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು.
———––ವಸಂತ್ ಕುಮಾರ್