ಹೊಳೆನರಸೀಪುರ:ವಕೀಲರ ದಿನಾಚರಣೆ-ವಕೀಲ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿ ಎಂದ ನ್ಯಾ,ನಿವೇದಿತಾ ಮಹಂತೇಶ್ ಮುನವಳಿಮಠ್

ಹೊಳೆನರಸೀಪುರ:ಕೆಲವೊಮ್ಮೆ ನಾವು ಏನೋ ಓದಬೇಕು ಅಂದುಕೊಂಡಿರುತ್ತೇವೆ.ಅದಕ್ಕೆ ಅವಕಾಶ ಸಿಗದೆ ವಕೀಲಿ ವೃತ್ತಿಗೆ ಬಂದಿರುತ್ತೇವೆ.ವಕೀಲಿ ವೃತ್ತಿ ಪ್ರಾರಂಭಿಸಿದ ನಂತರ ನಮಗೆ,ನಾವು ಈ ವೃತ್ತಿಗೆ ಬಂದು ಒಳ್ಳೆ ಕೆಲಸ ಮಾಡಿದೆವು ಎನಿಸುತ್ತದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ನಿವೇದಿತಾ ಮಹಂತೇಶ್ ಮುನವಳಿಮಠ್ ಅಭಿಪ್ರಾಯಪಟ್ಟರು.

ಮಂಗಳವಾರ ನ್ಯಾಯಾಲಯದಲ್ಲಿ, ತಾಲ್ಲೂಕು ವಕೀಲರ ಸಂಘ ಆಯೋಜಿಸಿದ್ದ ವಕೀಲರ ದಿನಾಚರಣೆ ಹಾಗೂ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಕೀಲರು ನೊಂದವರಿಗೆ,ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯದೊರಕಿಸಿ ಕೊಟ್ಟು ಕಕ್ಷಿದಾರರಿಗೆ ಸಮಾಧಾನ ತಂದು ಕೊಡುತ್ತಾರೆ.ಸಮಾಧಾನಗೊಂಡವರ ಹಾರೈಕೆ ವಕೀಲರ ಮೇಲಿರುತ್ತದೆ. ಅದಕ್ಕಾಗಿ ಇದು ಶ್ರೇಷ್ಠ ವೃತ್ತಿ ಎನಿಸಿದೆ ಎಂದರು.

ಕನಕದಾಸರು 14 ನೇ ಶತಮಾನದಲ್ಲೇ ಸಮಾಜಕ್ಕೆ ಮಾನವೀಯತೆಯನ್ನು, ಸಮಾನತೆಯನ್ನು ಭೋಧಿಸಿದ್ದಾರೆ. ಅವರ ವಚನಗಳ ಸಾರವನ್ನು ಅರಿತು, ಅವರು ತೋರಿದ ಮಾರ್ಗದಲ್ಲಿ ನಡೆದರೆ ಸದಾ ಸಂತೋಷವಾಗಿರಬಹುದು ಎಂದು ಹೇಳಿದರು.

ಮುಖ್ಯಭಾಷಣಕಾರರಾಗಿ ಆಗಮಿಸಿದ ಶಿಕ್ಷಕ ಎಂ.ಜಿ. ಪರಮೇಶ್ ಮಾತನಾಡಿ, ಡಾ. ಬಾಬುರಾಜೇಂದ್ರ ಪ್ರಸಾದ್ ಅವರ ಜನ್ಮದಿನಾಚರಣೆಯನ್ನು ವಕೀಲರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ವಕೀಲರಿಂದ ನ್ಯಾಯ ಪಡೆದುಕೊಂಡ ಅನೇಕ ಕಕ್ಷಿದಾರರು ವಕೀರನ್ನು ನನ್ನ ಪಾಲಿನ ದೇವರು ಎಂದು ಭಾವಿಸಿಕೊಂಡಿದ್ದಾರೆ. ಇಂತಹ ವೃತ್ತಿಯಲ್ಲಿರುವ ನೀವೇ
ಧನ್ಯರು ಎಂದರು.

ಕನಕದಾಸರು 15 ನೇ ಶತಮಾನದಲ್ಲಿ 316 ಕೀರ್ತನೆಗಳನ್ನು ರಚಿಸಿದ್ದಾರೆ. ಆ ಎಲ್ಲಾ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದೆ. ಬೀರಪ್ಪ, ಬಿಚ್ಚಮ್ಮನ ದಂಪತಿಗೆ ತಿಮ್ಮಪ್ಪನ ವರದಿಂದ ಹುಟ್ಟಿದ ಕನಕದಾಸರ ಮೊದಲ ಹೆಸರು ತಿಮ್ಮಪ್ಪ ನಾಯಕ. ನಂತರ ಇವರು ಉದಾತ್ತ, ಸಮಾನತೆಯ, ಸಮಾಜಿಕ ನ್ಯಾಯದ ಚಿಂತನೆಯನ್ನು ಜಗತ್ತಿಗೆ ಸಾರುತ್ತಾ, ಸಾರುತ್ತಾ ಕನಕ ದಾಸರಾದರು. ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ಕನಕದಾಸರು ಪ್ರವರ್ಧಮಾನಕ್ಕೆ ಬಂದವರು. ಕನಕದಾಸರು ಮಹಾನ್ ದೈವ ಭಕ್ತರಾಗಿದ್ದರು. ಕನಕ ದಾಸರು ಶೂದ್ರ ಎನ್ನುವ ಕಾರಣಕ್ಕೆ ಉಡುಪಿಯ ಕೃಷ್ಣನ ದೇವಸ್ಥಾನದ ಒಳಗೆ ಬಿಡದಿದ್ದಾಗ ಕನಕದಾಸರು ಅಲ್ಲೇ ಕುಳಿತು ಹಾಡಿದ ಕೀರ್ತನೆಗಳು ಹಾಗೂ ಭಕ್ತಿಯನ್ನು ಮೆಚ್ಚಿ ಶ್ರೀ ಕೃಷ್ಣನೇ ತಿರುಗಿ ದರ್ಶನ ನೀಡಿದ ಎನ್ನುವ ವಿವರಣೆ ಇತಿಹಾಸದಲ್ಲಿ ಇರುವುದನ್ನು ನಾವೆಲ್ಲಾ ಓದಿದ್ದೇವೆ ಎಂದು ಹೇಳಿ ಕನಕದಾಸರ ಕೀರ್ತನೆಗಳನ್ನು ಹಾಡಿ ವಿಶ್ಲೀಷಿಸಿದರು.

ನ್ಯಾಯಾಧೀಶರಾದ ಚೇತನಾ, ವಕೀಲರ ಸಂಘದ ಅಧ್ಯಕ್ಷ ಎಂ.ವಿ. ಶಿವಕುಮಾರ್, ಕಾರ್ಯದರ್ಶಿ ಯು.ಆರ್. ಸತೀಶ್, ಸಹಾಯಕ ಸರಕಾರಿ ಅಭಿಯೋಜಕರಾದ ಶಿವಕುಮಾರ್, ಶಿರಿನ್, ಹಿರಿಯ ವಕೀಲರಾದ ಭಾಷ್ಯಂ, ಆರ್.ಡಿ. ರವೀಶ್, ಕೆ.ಆರ್. ಸುನಿಲ್ಕುಮಾರ್, ರಾಮಪ್ರಸನ್ನ, ಪುರುಷೋತ್ತಮ, ಶಿವಪ್ರಸಾದ್, ಶ್ರೀಧರ್, ಜಯಪ್ರಕಾಶ್, ಅರುಣ್ಕುಮಾರ್, ರವಿ, ಲಾವಣ್ಯ, ಮೈತ್ರಿ, ಮಮತಾ, ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಕೀಲೆ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.ವಕೀಲ ರಾಜಶೇಖರಯ್ಯ ಸ್ವಾಗತಿಸಿದರು.

—–——–ಸುಕುಮಾರ್

Leave a Reply

Your email address will not be published. Required fields are marked *

× How can I help you?