
ಹೊಳೆನರಸೀಪರ:ರಾಷ್ಟ್ರಾಧ್ಯಂತ 1300 ಕ್ಕೂ ಹೆಚ್ಚು ವಾಸವಿ ಕ್ಲಬ್ ಗಳನ್ನು ಆರ್ಯವೈಶ್ಯ ಜನಾಂಗದವರು ಪ್ರಾರಂಭಿಸಿದ್ದಾರೆ.ಈ ಕ್ಲಬ್ ದೇಶಾಧ್ಯಂತ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಎಲ್ಲಾ ವರ್ಗದ ಜನರಿಗೆ ಅಗತ್ಯ ಸಮಯದಲ್ಲಿ ಅಗತ್ಯ ಸೇವೆ, ಸಹಾಯ ನೀಡಿ ದೇಶದ ಜನರ ಗಮನ ಸೆಳೆದಿದೆ ಎಂದು ವಾಸವಿ ಕ್ಲಬ್ ಅಧ್ಯಕ್ಷ ರೋಹಿತ್ ನುಡಿದರು.
ಶುಕ್ರವಾರ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೈಸೂರಿನ ಸಂಗಂ ನೇತ್ರ ಚಿಕಿತ್ಸಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿ, ವಿಶ್ವದ 16 ದೇಶಗಳಲ್ಲಿರುವ ನಮ್ಮ ಕ್ಲಬ್ ನಲ್ಲಿ 1 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಸಮಾಜ ಸೇವೆಗಾಗಿ ಪ್ರತೀವರ್ಷ 30 ಕೋಟಿ ರೂಗಳನ್ನು ಖರ್ಚು ಮಾಡುತ್ತಿದ್ದೇವೆ. ಈ ದಿನ ಈ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು ಅಗತ್ಯ ಇರುವವರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆಯನ್ನೂ ಮಾಡಿಸುತ್ತೇವೆ ಎಂದರು.
ಪ್ರಾಂಶುಪಾಲ ಶ್ರೀಧರ್ ಮಾತನಾಡಿ ಸರಕಾರ ನಮಗೆ ನೀಡುವ ಅನುಧಾನದಿಂದ ನಾವು ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದಿಲ್ಲ. ಆದ್ದರಿಂದ ನಾವು ಸಂಘ ಸಂಸ್ಥೆಗಳ ಸಹಾಯ ಪಡೆದು ನಮ್ಮ ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ನಮ್ಮ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ತಂದುಕೊಡಬೇಕು ಎನ್ನುವ ಉದ್ದೇಶದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಎಲ್ಲಾ ಪ್ರಾಧ್ಯಾಪಕರು ಆಸಕ್ತಿಯಿಂದ ಕಲಿಸುತ್ತಿದ್ದೇವೆ. ನೀವು ವಾಸವಿ ಕ್ಲಬ್ ನವರು ನಮಗೆ ಅಗತ್ಯ ಇರುವ ಸಲಕರಣೆಗಳನ್ನು ಒದಗಿಸಿಕೊಡಿ ಎಂದು ಮನವಿ ಮಾಡಿದರು.

ಪ್ರಾಧ್ಯಾಪಕ ಶಿವರಾಂ ಮಾತನಾಡಿ, ಸಮಾಜಸೇವೆ ಒಂದು ಅತ್ಯುತ್ತಮ ಪೂಜೆ. ನಾವು ಐಷಾರಾಮಿ ಜೀವನಕ್ಕೆ ಹೆಚ್ಚಿನ ಮಹತ್ವ ನೀಡದೆ ಸರಳ ಜೀವನವನ್ನು ನಡೆಸುತ್ತಾ ನಮ್ಮ ಸಂಪಾದನೆಯ ಕೆಲವು ಭಾಗವನ್ನಾದರು ಸಮಾಜ ಸೇವೆಗೆ ಮುಡಿಪಾಗಿಡೋಣ ಎಂದರು.
ಎ.ಆರ್. ರವಿಕುಮಾರ್, ಎಸ್ ಗೋಕುಲ್.ರವಿಕೀರ್ತಿ, ಮಂಜುನಾಥ್ ಗುಪ್ತಾ, ಹಾಗೂ ಸದಸ್ಯರು ಭಾಗವಹಿಸಿದ್ದರು. ಮಮತಾ ರೋಹಿತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹೇಮಾ ನಾಗೇಂದ್ರ ಸ್ವಾಗತಿಸಿದರು.ಪಾಲಿಟೆಕ್ನಿಕ್ ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರು ಕಣ್ಣುಪರೀಕ್ಷೆ ಮಾಡಿಸಿಕೊಂಡರು.
——————––ಸುಕುಮಾರ್