ಹೊಳೆನರಸೀಪುರ:ಇತ್ತೀಚಿನ ದಿನಗಳಲ್ಲಿ ಮಕ್ಕಳ ಕೈಯಲ್ಲಿ ಪುಸ್ತಕಗಳಿಗಿಂತ ಹೆಚ್ಚು ಸಮಯ ಮೊಬೈಲ್ ಗಳೆ ಇರುತ್ತದೆ.ಸದಾ ಮೊಬೈಲ್ ನಲ್ಲಿ ಬೇಕು ಬೇಡದ್ದನ್ನೆಲ್ಲಾ ನೋಡುವ ನಿಮ್ಮ ಮಕ್ಕಳು ಮುದೊಂದು ದಿನ ನಿಮಗೇ ಕಂಟಕ ಆಗುವ ಅಪಾಯ ಇದೆ. ಆದ್ದರಿಂದ ಮಕ್ಕಳನ್ನು ಶಾಲೆಗೆ ಸೇರಿಸಿದರೆ ನಮ್ಮ ಜವಾಬ್ದಾರಿ ಮುಗಿಯಿತು ಎನ್ನುವ ಬೇಜವಾಬ್ದಾರಿ ತೋರದೆ ಮನೆಯಲ್ಲಿ ಮಕ್ಕಳಿಗೆ ಮೌಲ್ಯವನ್ನು ಕಲಿಸಿ. ಗುರುಹಿರಿಯರನ್ನು ಗೌರವಿಸುವುದನ್ನು ಕಲಿಸಿ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಕೆ. ಪಾಂಡು ಸಲಹೆ ನೀಡಿದರು.
ಶುಕ್ರವಾರ ಪಟ್ಟಣದ ವೆಂಕಟೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದಲ್ಲಿ ಶಾಲೆಯಲ್ಲಿ ಓದಿ ಹೆಚ್ಚು ಅಂಕಗಳಿಸಿ ಉನ್ನತ ವಿದ್ಯಾಭ್ಯಾ ಸಕ್ಕೆ ತೆರಳಿರುವ ಮೋನಿಶಾ ಮತ್ತು ಶ್ರೇಯಸ್ ಅವರನ್ನು ಅಭಿಂದಿಸಿ ಮಾತನಾಡಿ,ಕೆಲವು ಖಾಸಗಿ ಶಾಲೆಗಳು,ಶಾಲೆಗಳನ್ನು ವ್ಯಾಪಾರಿ ಕೇಂದ್ರಗಳನ್ನಾಗಿಸಿಕೊಂಡಿವೆ.ಈ ಶಾಲೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ ಗಮನ ಸೆಳೆದಿದೆ. ಇಂತಹ ಕ್ರಮವನ್ನು ಎಲ್ಲಾ ಖಾಸಗಿ ಶಾಲೆಗಳು ತೆಗೆದುಕೊಳ್ಳಬೇಕು ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಮಾತನಾಡಿ ಸರಕಾರಿ ಶಾಲೆಗಳಿಗೆ ಮಾರ್ಗಸೂಚಿಯನ್ನು ನೀಡಿದೆ. ಆ ಮಾರ್ಗಸೂಚಿಯ ಅನುಸಾರ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ, ಸೂಕ್ತ ಹಾಗೂ ಅಗತ್ಯ ಶಿಕ್ಷಣ ಪಡೆದಿರುವ ಶಿಕ್ಷಕರನ್ನೇ ನೇಮಿಸಿಕೊಳ್ಳಬೇಕು.
ಸರಕಾರದ ಯಾವುದೇ ನಿಯಮವನ್ನು ಉಲ್ಲಂಘಿಸದೆ ಉತ್ತಮ ಶಿಕ್ಷಣ ನೀಡಿ, ಉತ್ತಮ ಫಲಿತಾಂಶ ನೀಡುತ್ತಿರುವ ಈ ವೆಂಕಟೇಶ್ವರ ಶಾಲೆಯ ವಿರುದ್ದ ಯಾವುದೇ ಅಪವಾದಗಳು ಇಲ್ಲ ಎಂದರು.
ಮುಖ್ಯಶಿಕ್ಷಕ ಶ್ರೀಧರ್ ವಾರ್ಷಿಕ ವರದಿ ಓದಿದರು. ಕಾರ್ಯದರ್ಶಿ ಎಚ್.ವಿ. ರವಿಕುಮಾರ್, ಉಪಾಧ್ಯಕ್ಷ ಕಾಂತರಾಜು, ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್ , ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಮಹೇಶ್, ಕೃಷ್ಣ, ರಾಮಚಂದ್ರ, ಕೇಶವ, ಕಾಂತರಾಜು,ಕೃಷ್ಣಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿಕ್ಷಕಿ ಅರ್ಪಿತಾ ಸ್ವಾಗತಿಸಿದರು.ವಿದ್ಯಾರ್ಥಿ ವಿದ್ಯಾರ್ಥಿನಿಯರು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ಆಕರ್ಷಕವಾಗಿತ್ತು.
————–-ಸುಕುಮಾರ್