ಹೊಳೆನರಸೀಪುರ: ಸಂವಿಧಾನ ರಚನೆ ಸಮಯದಲ್ಲೇ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆಯಬೇಕು ಎಂದು ಉಲ್ಲೇಖಿಸಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯಬಂದು 77 ವರ್ಷ ಆಗಿದ್ದರೂ ಇನ್ನೂ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರೆತಿಲ್ಲ. ಜಾತಿ, ಧರ್ಮ, ಗಂಡು, ಹೆಣ್ಣು, ಮೇಲು, ಕೀಳು ಎನ್ನುವ ಭಾವನೆಯೇ ಹೋಗಿಲ್ಲ. ಇದನ್ನೆಲ್ಲಾ ಹೋಗಲಾಡಿಸಿ ಎಲ್ಲರೂ ಸಮಾನರು ಎನ್ನುವ ಭಾವನೆ ಬಂದಾಗ ಸಮಾಜಿಕ ನ್ಯಾಯ ಸಿಕ್ಕಂತಾಗುತ್ತದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ನಿವೇದಿತಾ ಮಹಂತೇಶ್ ಅಭಿಪ್ರಾಯಪಟ್ಟರು.
ಗುರುವಾರ ಮಹಿಳಾ ಗೃಹ ವಿಜ್ಞಾನ ಸರ್ಕಾರಿ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ “ವಿಶ್ವ ಸಾಮಾಜಿಕ ನ್ಯಾಯದಿನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಭ್ರಷ್ಟಾಚಾರ, ಅತ್ಯಾಚಾರ, ಕೊಲೆ ಸುಲಿಗೆಗಳೆಲ್ಲ ಇನ್ನೂ ನಡೆಯುತ್ತಿದೆ. ಇದೆಲ್ಲಾ ಸಮಾಜಿಕ ಪಿಡುಗು ಎಂಬುದನ್ನು ಅರಿತು ಎಲ್ಲರೂ ತಿದ್ದಿಕೊಂಡು ನಡೆದರೆ ಸಾಮಾಜಿಕ ನ್ಯಾಯ ಸಾಧ್ಯ. ಉಪದೇಶ ಮಾಡುವವರೆಲ್ಲಾ ಅವರು ಉಪದೇಶ ಮಾಡಿದಂತೆ ಅವರೇ ನಡೆದುಕೊಂಡರೆ ಸಮಾಜ ಸುಧಾರಿಸುತ್ತದೆ ಎಂದರು.

ಸಿವಿಲ್ ನ್ಯಾಯಾಧೀಶರಾದ ಚೇತನಾ ಮಾತನಾಡಿ “ನೀ ಬದಲಾದರೆ ಲೋಕ ಬದಲಾಗುವುದು” ಎನ್ನುವ ಹಿರಿಯರ ನುಡಿಯಂತೆ ಎಲ್ಲರೂ ಬದಲಾದರೆ ಸಾಮಾಜಿಕ ನ್ಯಾಯ ಸಾಧ್ಯ. ಎಲ್ಲರಿಗೂ ಸಮಾನವಾದ ಹಕ್ಕು ಸಿಕ್ಕಿ ಎಲ್ಲರೂ ತಮ್ಮ ತಮ್ಮ ಕರ್ತವ್ಯವನ್ನು ಅರಿತು ನಡೆದರೆ ಸಮಾಜದಲ್ಲಿ ಸಾಮಾಜಿಕ ನ್ಯಾಯ ಸಿಗಬಹುದು. ಮೊದಲು ನಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಂಡು ನಂತರ ಸಮಾಜದ ಬದಲಾವಣೆಗೆ ಸಾಗಬೇಕು. ನಾವು ನೈತಿಕವಾಗಿಲ್ಲದೆ, ನಮ್ಮ ಜೀವನ ಸರಿ ಇಲ್ಲದ, ಸಮಯದಲ್ಲಿ ಸಾಮಾಜಿಕ ನ್ಯಾಯಕ್ಕೆ ಶ್ರಮಿಸಿದರೆ ಅದಕ್ಕೆ ಬೆಲೆ ಇರುವುದಿಲ್ಲ ಎಂದರು.
ಹಿರಿಯ ವಕೀಲ ಎಚ್.ಎಸ್. ಅರುಣ್ ಕುಮಾರ್ ಸಾಮಾಜಿಕ ನ್ಯಾಯ ಹಾಗೂ ಬಾಂಧವ್ಯದಡಿ ನಮ್ಮ ಮನೆಯಿಂದಲೆ ಸಾಮಾಜಿಕ ನ್ಯಾಯ ಪ್ರಾರಂಭವಾಗಬೇಕು, ಕುಟುಂಬದಲ್ಲಿ ನಾಲ್ಕು ಸೋದರರ ನಡುವೆ ತಂದೆ ತೋರುವ ಪ್ರೀತಿ, ಸಾಮಾಜಿಕ ನ್ಯಾಯಕ್ಕೆ ಸಾಕ್ಷಿಯಾಗಿದೆ. ನಮ್ಮ ಧರ್ಮಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತ ಸಾಮಾಜಿಕ ನ್ಯಾಯದ ಬಗ್ಗೆ ಕನ್ನಡಿ ಹಿಡಿಯುತ್ತದೆ ಎಂದರು.
ಈ ವೇಳೆ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜು ಪ್ರಾಂಶುಪಾಲೆ ಆಶಾ ಜ್ಯೋತಿ, ತಾ. ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರ್, ಪ್ರ ಪ್ರಾಧ್ಯಾಪಕರಾದ ಡಾ. ಕೃಷ್ಣಮೂರ್ತಿ , ಡಾ. ಅಶೋಕ್, ಶ್ವೇತಾನಾಯಕ್, ರಾಘವೇಂದ್ರ ಭಾಗವಹಿಸಿದ್ದರು.