ಕೊರಟಗೆರೆ;ಸಾರ್ವಜನಿಕ ಆಸ್ಪತ್ರೆಗೆ ಸ್ಕ್ಯಾನಿಂಗ್ ಯಂತ್ರವನ್ನು ಹಾಗು ಅದನ್ನು ನಿರ್ವಹಿಸಲು ರೇಡಿಯೋಲಜಿ ತಜ್ಞರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಹೇಳಿದರು.
ಸಾರ್ವಜನಿಕ ಆಸ್ಪತ್ರೆಗೆ ಗರ್ಭಿಣಿ ಸ್ತ್ರೀಯರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಬರುತ್ತಿದ್ದಾರೆ. ಮಗುವಿನ ಚಲನವಲನ, ಬೆಳವಣಿಗೆಗಳನ್ನು ಪರೀಕ್ಷಿಸಲು ಸ್ಕ್ಯಾನಿಂಗ್ ಯಂತ್ರ ಲಭ್ಯವಿಲ್ಲ.ಪರೀಕ್ಷೆಯ ಅನಿವಾರ್ಯತೆ ಇದ್ದರೆ ಖಾಸಗಿ ಕೇಂದ್ರಗಳಿಗೆ ಅವರನ್ನು ಕಳುಹಿಸಬೇಕಾದ ಪರಿಸ್ಥಿತಿ ಇದೆ.ಬಡ ಹೆಣ್ಣುಮಕ್ಕಳಿಗೆ ಅಲ್ಲಿನ ಶುಲ್ಕ ಪಾವತಿಸಲು ಸಾದ್ಯವಾಗುತ್ತಿಲ್ಲ.ಇದನ್ನು ಮನಗಂಡು ಸ್ಕ್ಯಾನಿಂಗ್ ಯಂತ್ರವನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತುಳಸಿಮದ್ದಿನೇನಿ ಯವರು ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಆಸ್ಪತ್ರೆಗೆ ದಿನಕ್ಕೆ ಸರಾಸರಿ 500 ರೋಗಿಗಳು ಬರುತ್ತಿದ್ದು ಈಗಿರುವ ಕಟ್ಟಡದಲ್ಲಿ ಅಷ್ಟು ಜನರ ನಿರ್ವಹಣೆ ಕಷ್ಟವಿದೆ,ನೂತನ ಆಸ್ಪತ್ರೆಗೆ ಜಾಗ ಮಂಜೂರು ಆಗಿರುವ ಬಗ್ಗೆ ಗಮನಕ್ಕೆ ಬಂದಿದ್ದು ಅದನ್ನು ಪರಿಶೀಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ್, ತಾಲ್ಲೂಕು ವೈದ್ಯಾಧಿಕಾರಿ ವಿಜಯ್‍ಕುಮಾರ್, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಲಕ್ಷೀಕಾಂತ್, ಡಾ.ಮೋಹನ್‍ದಾಸ್, ಶಿವರಾಜ್, ಕಂದಾಯ ಆಧಿಕಾರಿ ಬಸವರಾಜು ಸೇರಿದಂತೆ ಇತರರು ಹಾಜರಿದ್ದರು.
ತಾಲ್ಲೂಕಿನ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ಫಲಾನುಭವಿಗಳ ಅಯ್ಕೆ ಮಾಡಲಾಗುತ್ತಿದೆ.ಅದನ್ನು ಇನ್ನು ಚುರುಕುಗೊಳಿಸಿ ಅಕ್ಟೋಬರ್ ಒಳಗೆ ಆಯ್ಕೆ ಪ್ರಕಿಯೆ ಮುಗಿಸಿ ಡಿಸೆಂಬರ್ ಒಳಗಾಗಿ ಸವಲತ್ತುಗಳನ್ನು ಸಂಪೂರ್ಣವಾಗಿ ವಿತರಿಸುವಂತೆ ಸೂಚಿಸಲಾಗಿದೆ.
——————-ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ
ಜಿಲ್ಲೆಯಲ್ಲಿ ಅಂಗವಾಡಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಪಡೆದ್ದಿದ್ದು ಈ ತಿಂಗಳ ಅಂತ್ಯದೊಳಗೆ ಅವುಗಳನ್ನು ತುಂಬಲಾಗುವುದು.ಈ ಸಂಬಂಧ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುವರು,ಕೊರಟಗೆರೆ ತಾಲ್ಲೂಕು ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿನಲ್ಲೂ 2000 ನಿವೇಶಗಳನ್ನು ಗುರುತಿಸಿ ಹಂಚುವ ಗುರಿ ಹೊಂದಿದ್ದು ಕೆಲವು ಕಡೆ ಕಲ್ಲು ಬಂಡೆಗಳಿದ್ದು ನಿವೇಶನ ಗುರುತಿಸಲು ವಿಳಂಬವಾಗುತ್ತಿದೆ ಎಂಬ ವಿವರಗಳ ಕೊಟ್ಟರು.
————ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ
ಔಷಧಿ ದಾಸ್ತಾನು ಸಿಬ್ಬಂದಿಗೆ ನೋಟೀಸ್-
ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಭೇಟಿ ನೀಡಿ ಪರಿಶೀಲಿಸಿದಾಗ, ಔಷಧಿ ಕೇಂದ್ರದಲ್ಲಿನ ಸಿಬ್ಬಂದಿಯು ಆಸ್ಪತ್ರೆಯ ಒಳರೋಗಿಗಳ ವಿವರವನ್ನು ರಿಜಿಸ್ಟಾರ್ ನಲ್ಲಿ 14 ಎಂದು ನಮೂದಿಸಿದ್ದು,ನಂತರ ಆ ವಿವರವನ್ನು ಕಂಪ್ಯೂಟರೀಕರಣ ಗೊಳಿಸುವಾಗ 114 ಎಂದು ದಾಖಲಿಸಲಾಗಿತ್ತು.
ಈ ಬಗ್ಗೆ ಕಾರ್ಯದರ್ಶಿಗಳು ವಿಚಾರಿಸಿದಾಗ ನಮೂದು ಮಾಡುವಾಗ ಕಣ್ತಪ್ಪಿನಿಂದ ಹೀಗಾಗಿದೆ ಎಂದು ಸಿಬ್ಬಂದಿ ಉತ್ತರಿಸಿದರು.
ಈ ರೀತಿ ಒಳರೋಗಿಗಳ ಸುಳ್ಳು ಲೆಕ್ಕದಿಂದ ರೋಗಿಗಳಿಗೆ ನೀಡಬೇಕಾದ ಔಷಧಿ, ಮಾತ್ರೆಗಳು ,ಸಿರೇಂಜ್,ಗ್ಲೂಕೂಸ್ ನಲ್ಲಿ ಅವ್ಯವಹಾರ ಆಗುವ ಸಾಧ್ಯತೆ ಇದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.
ಆಗ ಕಾರ್ಯಧರ್ಶಿಗಳು ಸಿಬ್ಬಂದಿಗೆ ನೋಟೀಸು ನೀಡಿ ವಿಚಾರಣೆ ನಡೆಸುವಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು
——-ಶ್ರೀನಿವಾಸ್ ಕೊರಟಗೆರೆ