ಮಂಡ್ಯ- ಪ್ರಧಾನಮಂತ್ರಿ ಅವಾಸ್ ಯೋಜನೆ(ಗ್ರಾಮೀಣ)ಯಡಿ ಅರ್ಹ ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಸದರಿ ಯೋಜನೆಯ ಅವಧಿಯನ್ನು 2024-25 ರಿಂದ 2028-29 ರವರೆಗೆ ವಿಸ್ತರಿಸಲಾಗಿದ್ದು ಗ್ರಾಮ ಪಂಚಾಯತ್‌ಗಳ ವತಿಯಿಂದ 2018 ರ ಸಮೀಕ್ಷಾ ಪಟ್ಟಿಗೆ ಹೆಚ್ಚುವರಿಯಾಗಿ ವಸತಿ ರಹಿತರ ಸಮೀಕ್ಷೆಯನ್ನು ಮಾರ್ಚ್ 31 ರೊಳಗೆ ನಡೆಸಲು ಸರ್ಕಾರದಿಂದ ನಿರ್ದೇಶನ ನೀಡಲಾಗಿದೆ.
ಅದರಂತೆ, ಜಿಲ್ಲೆಯ 233 ಗ್ರಾಮ ಪಂಚಾಯಿತಿಗಳಲ್ಲಿ ವಸತಿ ರಹಿತರ ಸಮೀಕ್ಷೆ ಕಾರ್ಯಕೈಗೊಳ್ಳಲಾಗುತಿದ್ದು ಈಗಾಗಲೇ ಗ್ರಾಮ ಪಂಚಾಯಿತಿವಾರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಬ್ಬಂದಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಅರ್ಹ ವಸತಿ ರಹಿತರ ಕುಟುಂಬಗಳ ಮನೆ ಮನೆಗೆ ಭೇಟಿ ನೀಡಿ ತಂತ್ರಾಂಶದ ಮೂಲಕ ಸಮೀಕ್ಷೆ ನಡೆಸುತ್ತಿದ್ದು, ಅರ್ಹ ವಸತಿ ರಹಿತರು ಸಮೀಕ್ಷೆ ಸಂದರ್ಭದಲ್ಲಿ ಕಡ್ಡಾಯವಾಗಿ ಆಧಾರ್ ಕಾರ್ಡ್, ಬಿ.ಪಿ.ಎಲ್. ಕಾರ್ಡ್, ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರ. ನರೇಗಾ ಜಾಬ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ವಾಸಿಸುತ್ತಿರುವ ಮನೆ ಹಾಗೂ ಮನೆ ನಿರ್ಮಿಸಲು ಹೊಂದಿರುವ ನಿವೇಶನದ ಸ್ಥಳಗಳ ವಿವರಗಳನ್ನು ಸಮೀಕ್ಷೆ ಸಿಬ್ಬಂದಿಗಳಿಗೆ ನೀಡಬೇಕಿರುತ್ತದೆ.

ವಸತಿ ಕೋರುವ ಅರ್ಹ ವಸತಿ ರಹಿತರು ಕಡ್ಡಾಯವಾಗಿ ಮಹಿಳೆಯರಾಗಿದ್ದು, (ಹಿರಿಯ ನಾಗರೀಕ, ವಿಧುರ, ಅಂಗವಿಕಲ, ಮಾಜಿ ಸೈನಿಕರಾಗಿದ್ದಲ್ಲಿ ಪುರುಷ ಫಲಾನುಭವಿಗಳನ್ನು ಸಹ ಪರಿಗಣಿಸಬಹುದಾಗಿದೆ.) ಕುಟುಂಬದ ಹೆಸರಿನಲ್ಲಿ ಯಾವುದೇ ಪಕ್ಕಾ ಮನೆ ಹೊಂದಿರಬಾರದು. ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವುದು ಕಡ್ಡಾಯವಾಗಿದ್ದು, ವಸತಿ ರಹಿತರು ಅವಾಸ್ ಪ್ಲಸ್ ತಂತ್ರಾಂಶದ ಮೂಲಕ ಸ್ವಯಂ ಸಮೀಕ್ಷಾ ಕಾರ್ಯಕೈಗೊಳ್ಳಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಂದ ಪಡೆಯಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.