ಕೆ.ಆರ್.ಪೇಟೆ- ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳು ಕೆ.ಆರ್.ಪೇಟೆ ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರವು ೮ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾ ಸ್ಥಳಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪನಹಳ್ಳಿ ಅರುಣ್‌ಕುಮಾರ್ ಅವರು ಬೇಟಿ ನೀಡಿ ತಮ್ಮ ಬೆಂಬಲ ವ್ಯಕ್ತ ಪಡಿಸಿದರು.
ಈ ವೇಳೆ ಮಾತನಾಡಿದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಪ್ಪನಹಳ್ಳಿ ಅರುಣ್‌ಕುಮಾರ್ ಅವರು ನಮ್ಮ ರೈತರು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳು ಸಕಾಲಕ್ಕೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸೇವೆ ಸಲ್ಲಿಸಬೇಕಾದರೆ ಅವರಿಗೆ ಸೌಕರ್ಯಗಳನ್ನು ಸರ್ಕಾರವು ಒದಗಿಸಿಕೊಡಬೇಕು.
ಪ್ರಮುಖವಾಗಿ ರೈತರ ಖಾತೆ, ಆರ್.ಟಿ.ಸಿ ತಿದ್ದುಪಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಕೂಲಕ್ಕೆ ಪೋಷಕರ ಆಧಾಯ ಪ್ರಮಾಣ ಪತ್ರ, ರೈತರಿಗೆ ವಂಶವೃಕ್ಷ, ಸಣ್ಣ ಹಿಡುವಳಿ ರೈತ ಪತ್ರ, ವಿಧವಾ ವೇತನ, ವೃದ್ದಾಪ್ಯಾ ವೇತನ, ವಿಕಲ ಚೇತನ ಮಾಸಶನಗಳು, ಬಿ.ಪಿ.ಎಲ್ ಕಾರ್ಡ್ ಅರ್ಹರಿಗೆ ಮಾತ್ರ ತಲುಪಬೇಕಾದರೆ ಗ್ರಾಮ ಆಡಳಿತ ಅಧಿಕಾರಿಗಳ ಪ್ರಾಥಮಿಕ ವರದಿ ಅತ್ಯಗತ್ಯವಾಗಿರುತ್ತದೆ.
ಈ ವರದಿಯನ್ನು ಗ್ರಾಮಕ್ಕೆ ಬೇಟಿ ನೀಡಿ ಗ್ರಾಮದಲ್ಲಿ ನೈಜತೆಯನ್ನು ಪರಿಶೀಲನೆ ಮಾಡಿ ಗ್ರಾಮ ಆಡಳಿತ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ವರದಿ ನೀಡಬೇಕಾಗಿರುತ್ತದೆ ಈ ಎಲ್ಲಾ ಕೆಲಸಗಳನ್ನು ಸಮರ್ಪಕವಾಗಿ ಮಾಡಬೇಕಾದರೆ ಅವರಿಗೆ ಮೂಲ ಸೌಕರ್ಯನಗಳನ್ನು ಒದಗಿಸಿಕೊಡಬೇಕಾದುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.

ಆದರೆ ಕಳೆದ 8 ದಿನಗಳಿಂದ 2 ನೇ ಹಂತದ ಪ್ರತಿಭಟನೆ ನಡೆಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳ ಬಗ್ಗೆ ಯಾವುದೇ ಸ್ಪಂಧನೆ ನೀಡದೇ ಜಾಣಮೌನ ವಹಿಸಿರುವ ಸರ್ಕಾರದ ನಡೆ ಸರಿಯಾದ ಕ್ರಮವಲ್ಲ. ಗ್ರಾಮ ಆಡಳಿತಾಧಿಕಾರಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ತಾಲ್ಲೂಕು ಕಚೇರಿಯಲ್ಲಿ ಯಾವುದೇ ಕೆಲಸಗಳನ್ನು ನಡೆಯುತ್ತಿಲ್ಲ.
ಹಿರಿಯ ಅಧಿಕಾರಿಗಳು ಎಲ್ಲದಕ್ಕೂ ಗ್ರಾಮ ಆಡಳಿತಾಧಿಕಾರಿಗಳ ಪ್ರತಿಭಟನೆ ಮುಗಿಯಲಿ ಎಂದು ಸಬೂಬು ಹೇಳುತ್ತಿದ್ದಾರೆ ಇದರಿಂದ ರೈತರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿರುತ್ತದೆ ಹಾಗಾಗಿ ಕೂಡಲೇ ಸರ್ಕಾರವು ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆಗೆ ಸ್ಪಂಧಿಸಿ, ಬೇಡಿಕೆಗಳನ್ನು ಈಡೇರಿಸಬೇಕು ಈ ಮೂಲಕ ರೈತರ ಕೆಲಸಗಳು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಅರುಣ್‌ಕುಮಾರ್ ಸರ್ಕಾರವನ್ನು ಒತ್ತಾಯ ಮಾಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ರಾಜ್ಯ ಉಪಾಧ್ಯಕ್ಷ ಡಿ.ಪಿ.ಹರೀಶ್, ತಾಲ್ಲೂಕು ಘಟಕದ ಅಧ್ಯಕ್ಷ ದಶರಥ ಪೂಜಾರಿ, ತಾಲ್ಲೂಕು ಘಟಕದ ಗೌರವ ಸಲಹೆಗಾರ ಸುಧಾಕರ್, ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಸೋಮಾಚಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುನಿಲ್ ಗಾಣಿಗೇರ್, ತಾಲ್ಲೂಕು ಉಪಾಧ್ಯಕ್ಷ ರಾಘವೇಂದ್ರ, ತಾಲ್ಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ಕೆ.ಸಾವಿತ್ರಿ, ಕಾರ್ಯದರ್ಶಿ ಬಿ.ಹೊನ್ನೇಶ್, ಖಜಾಂಚಿ ಕಾವ್ಯಗೌಡ, ನಿರ್ದೇಶಕರಾದ ಮಧು, ಶ್ವೇತ, ಪೂಜಾ, ಕಾಂತೇಶ್, ಸುನಿಲ್, ಮಮತಾಜಯರಾಮೇಗೌಡ ಸೇರಿದಂತೆ ತಾಲೂಕಿನ ಎಲ್ಲಾ ವೃತ್ತಗಳ ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.